ಬೆಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿಯ ಹಲವು ಭಾಗಗಗಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ವರುಣನ ಆರ್ಭಟಕ್ಕೆ ಮಳೆ ನೀರಿನಲ್ಲಿ ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಆಂಧ್ರ ಮೂಲದ ಭಾನುರೇಖಾ ಮೃತ ಯುವತಿ.
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಯುವತಿ ಮತ್ತು ಅವರ ಕುಟುಂಬ ಇಲ್ಲಿನ ಕಬ್ಬನ್ ಪಾರ್ಕ್ ನೋಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಬಂದ ಪರಿಣಾಮ ಕೆ. ಆರ್. ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನೀರು ತುಂಬಿ ಕಾರು ಮುಳುಗಡೆಯಾಯಿತು. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಆರು ಜನರಿದ್ದರು. ತಕ್ಷಣ ಸ್ಥಳೀಯರು, ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದು, ಹರಸಾಹಸಪಟ್ಟು ಆರು ಜನರನ್ನು ರಕ್ಷಿಸಿದ್ದರು. ಅವರಲ್ಲಿ ಓರ್ವ ಯುವತಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ತಕ್ಷಣ ನೃಪತುಂಗ ರಸ್ತೆಯ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ರವಾನಿಸುವ ಮುನ್ನವೇ ಯುವತಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ:ಬೆಂಗಳೂರಿನ ಕೆ ಆರ್ ವೃತ್ತದ ಅವಘಡ ಸಂಭವಿಸಿದ ಸ್ಥಳ ಮತ್ತು ಸೆಂಟ್ ಮಾರ್ಥಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಬಳಿಕ ಮಾತನಾಡಿದರು. ಬಾಡಿಗೆ ವಾಹನ ಪಡೆದು ಬೆಂಗಳೂರು ನಗರವನ್ನು ನೋಡಲು ಬಂದಿದ್ದರು. ಚಾಲಕ ಸೇರಿ ಏಳು ಮಂದಿ ಕಾರಲ್ಲಿದ್ದರು. ಮಳೆಯ ಪ್ರಮಾಣದ ಅಂದಾಜು ಇರಲಿಲ್ಲ. ಚಾಲಕ ಅಂಡರ್ ಪಾಸ್ ಒಳಗೆ ಹೋಗಿದ್ದರಿಂದ ಕಾರಿನ ಬಾಗಿಲುಗಳು ಓಪನ್ ಆಗಿಲ್ಲ. ನೀರಿನ ಒತ್ತಡದಿಂದಾಗಿ ಗಾಜು ಸಹ ಜಾಮ್ ಆಗಿದೆ. ಭಾನುರೇಖಾ ನೀರು ಕುಡಿದ ಹಿನ್ನೆಲೆ ಸಾವನಪ್ಪಿದ್ದಾರೆ. ವಾಹನದಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿಗೆ ಏನು ಆಗಿಲ್ಲ. ಚಾಲಕ ಸಹ ಸುರಕ್ಷಿತವಾಗಿದ್ದಾನೆ. ಮೃತ ಯುವತಿ ಬೆಂಗಳೂರಿನ ಇನ್ಫೋಸಿಸ್ನಲ್ಲಿ ಉದ್ಯೋಗ ಮಾಡುತ್ತಿದ್ದು, ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದರು.
ವಿಪರೀತ ನೀರು ತುಂಬಿಕೊಂಡ ಸಂದರ್ಭ ಇಲ್ಲಿನ ಸಂಚಾರವನ್ನು ಬಂದು ಮಾಡಬೇಕು. ಆದರೆ ಅನಿರೀಕ್ಷಿತವಾಗಿ ಮಳೆ ಬಂದು ಏಕಾಏಕಿ ನೀರು ತುಂಬಿದೆ. ಆಸ್ಪತ್ರೆಯವರು ವಿಳಂಬ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ವಿಚಾರಣೆ ಮಾಡಿ, ನಿರ್ಲಕ್ಷ್ಯ ಮಾಡಿದ್ದರೆ ತನಿಖೆ ನಡೆಸುತ್ತೇವೆ. ಆರೋಗ್ಯ ಸಮಸ್ಯೆ ಎದುರಾದವರಿಗೆ ಸರ್ಕಾರವೇ ಚಿಕಿತ್ಸೆ ವೆಚ್ಚ ನೀಡಲಿದೆ. ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ರಾಜಕಾಲುವೆ ಒತ್ತುವರಿ ತೆರವನ್ನು ನಾವು ಹಿಂದೆ ಆರಂಭಿಸಿದ್ದೆವು. ಆದರೆ ಅದು ಅರ್ಧಕ್ಕೆ ನಿಂತಿದೆ ಮತ್ತೊಮ್ಮೆ ಆರಂಭಿಸುತ್ತೇವೆ ಎಂದು ಸಿಎಂ ತಿಳಿಸಿದರು.
ಅಧಿಕಾರಿಗಳ ಜೊತೆ ಸಿಎಂ ಸಭೆ:ನಗರದಲ್ಲಿ ಮಳೆಯಾದ ಬಳಿಕ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದರು. ಮಳೆಯಿಂದ ಬಿದ್ದಿರುವ ಮರಗಳನ್ನು ಬೇಗನೆ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಿ. ದೂರು ಬಂದ ಕಡೆ ಕೂಡಲೇ ಅಧಿಕಾರಿಗಳನ್ನು ಕಳಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಭೆಯಲ್ಲಿ ಸಿಎಂ ಸೂಚನೆ ನೀಡಿದರು.
ಅಂಡರ್ ಪಾಸ್ಗಳಿಂದ ನೀರು ಹೊರಹೋಗುವ ಚರಂಡಿಗಳು ಹೂಳು ತುಂಬಿರುವುದರಿಂದ ಏಕಾಏಕಿ ಮಳೆ ಸುರಿದಾಗ ನೀರು ಸಂಗ್ರಹಗೊಂಡು ಈ ರೀತಿಯ ಅವಘಡಕ್ಕೆ ಕಾರಣವಾಗುತ್ತಿದೆ. ನಗರದಲ್ಲಿ ಮಳೆ ನೀರು ಸಂಗ್ರಹಗೊಳ್ಳುವ ಎಲ್ಲಾ ಅಂಡರ್ ಪಾಸ್ಗಳನ್ನು ಗುರುತಿಸಿ ಸರಿಪಡಿಸಲಾಗುವುದು ಹಾಗೂ ಕಾಲುವೆ ಒತ್ತುವರಿಯನ್ನು ತೆರವು ಮಾಡಿ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.