ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಮುಂದುವರೆದಿದ್ದು, ಕೆರೆಗಳ ಕೋಡಿ ಬಿದ್ದಿರುವ ಪ್ರಮಾಣ ಇನ್ನಷ್ಟು ಏರಿಕೆಯಾಗಿ ಬಡಾವಣೆಗಳು, ರಸ್ತೆಗಳಲ್ಲಿ ನೀರು ಹರಿವು ಅಧಿಕಗೊಂಡು ಜನರು ಪರದಾಟ ನಡೆಸುತ್ತಿದ್ದಾರೆ.
ಬುಧವಾರವೂ ಸರ್ಜಾಪುರ ರಸ್ತೆಯ ಎರಡು ಲೇಔಟ್ಗಳು ಸಂಪೂರ್ಣ ಮಳೆ ನೀರಿನಿಂದ ತುಂಬಿವೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿ ಬಳಿ ನಾಲ್ಕೈದು ಕಿ.ಮೀ ರಸ್ತೆ ಜಲಾವೃತಗೊಂಡಿದೆ. ವಾಹನ ಸವಾರರು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇನ್ನು, ಮನೆಗಳಿಗೆ ನೀರು ನುಗಿದ್ದು, ನಿವಾಸಿಗಳು ಅನ್ನ-ನೀರಿಗೂ ಪರದಾಟ ನಡೆಸುತ್ತಿದ್ದಾರೆ. ಕುಡಿಯಲು, ಬಳಕೆಗೆ ಶುದ್ಧ ನೀರಿಲ್ಲದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೆಚ್ಎಸ್‌ಆರ್ ಬಡಾವಣೆಯ 4, 6, 7ನೇ ಹಂತ, ವಿಜಯಶ್ರೀ ಬಡಾವಣೆ, ಅನುಗ್ರಹ ಲೇಔಟ್, ಹೊಂಗಸಂದ್ರದ ಮುನಿಯಪ್ಪ ಬಡಾವಣೆ, ಕೋಡಿಚಿಕ್ಕನಹಳ್ಳಿ ಬಡಾವಣೆಗಳ ತಗ್ಗುಪ್ರದೇಶ, ಇಬ್ಬಲೂರು ವ್ಯಾಪ್ತಿಯಲ್ಲಿ ತೀವ್ರವಾಗಿ ಸಮಸ್ಯೆಗೆ ಒಳಗಾಗಿವೆ. ಈ ಬಡಾವಣೆಗಳ ವ್ಯಾಪ್ತಿಯಲ್ಲಿ ಮಡಿವಾಳ ಕೆರೆ, ಬೆಳ್ಳಂದೂರು ಕೆರೆಗಳ ನೀರು ಹರಿದು ಹೋಗಲು ಇರುವ ರಾಜಕಾಲುವೆ ಒತ್ತುವರಿಯಾಗಿದೆ.
ಇದರಿಂದ ಸಣ್ಣ ಮಳೆಗೂ ಅನುಗ್ರಹ ಬಡಾವಣೆ ತುಂಬುವಂತಾಗಿದೆ. ಇಲ್ಲಿನ 50 ಮನೆಗಳು ನೀರಿನಲ್ಲಿ ಮುಳುಗಿವೆ. ಮೂರ್ನಾಲ್ಕು ಅಡಿ ನೀರು ತುಂಬಿರುವ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ಮುಳುಗಿವೆ.