ಬೆಂಗಳೂರು:ಐಟಿ ಹಬ್ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಯಿಂದಾಗಿ ಐಟಿ ಕಂಪನಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಮಳೆಯಿಂದುಂಟಾದ ಹಾನಿ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಶುರುವಾದ ಮಳೆ ರಾತ್ರಿಯೆಲ್ಲಾ ಎಡಬಿಡದೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಹಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹೊಳೆಯಂತಾಗಿತ್ತು. ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.
ಬಾಣಸವಾಡಿ, ಜಯನಗರ, ಜೆ.ಪಿ.ನಗರ, ವಿಜಯ ನಗರ, ಮಲ್ಲೇಶ್ವರ, ರಾಜಾಜಿನಗರ, ಮೈಸೂರು ರಸ್ತೆ, ಕೆಂಗೇರಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಇಲ್ಲಿನ ತಗ್ಗು ಪ್ರದೇಶಗಳು ಹಾಗು ಅಂಡರ್ ಪಾಸ್ಗಳಲ್ಲಿ ನೀರು ತುಂಬಿದೆ. ಶಿವಾನಂದ ಸರ್ಕಲ್ನಲ್ಲಿ ಮ್ಯಾನ್ ಹೋಲ್ ತೆರೆದುಕೊಂಡು ನೀರು ರಸ್ತೆಯ ಮೇಲೆಲ್ಲಾ ಹರಿದು ರಸ್ತೆ ಕೆರೆಯಂತೆ ಕಂಡುಬಂತು. ಜಲಮಂಡಳಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದರು.