ಬೆಂಗಳೂರು :ರಾಜಧಾನಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇಂದು ಸಂಜೆ 7 ಗಂಟೆ ವೇಳೆಗೆ ಆರಂಭವಾದ ಮಳೆ ಬಿರುಸಾಗಿ ಸುರಿಯುತ್ತಿದೆ. ಇದರಿಂದ ನಗರದ ರಸ್ತೆಗಳಲ್ಲೆಲ್ಲ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣಾರ್ಭಟ ಏರ್ಪೋರ್ಟ್ ರಸ್ತೆ ದೇವನಹಳ್ಳಿಯ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡಿವೆ. ಬೀದಿ ಬದಿ ವ್ಯಾಪಾರಿಗಳ ತರಕಾರಿಗಳು ಕೊಚ್ಚಿ ಹೋಗುತ್ತಿವೆ. ವ್ಯಾಪಾರಸ್ಥರು ಅದನ್ನು ಕಾಪಾಡಿಕೊಳ್ಳಲು ಪರದಾಡಿದರು.
ಇನ್ನು, ಕಾರು, ಬೈಕ್‌ಗಳು ಕೂಡ ನೀರಲ್ಲಿ ಅರ್ಧದಷ್ಟು ಮುಳುಗಡೆಯಾಗಿವೆ. ಭಾಷ್ಯಂ ವೃತ್ತ, ಸದಾಶಿವನಗರದ ರಸ್ತೆಗಳಲ್ಲಿ ನೀರು ನಿಂತಿದೆ. ವಸಂತನಗರದಲ್ಲಿ ಮರ ಧರೆಗುರುಳಿವೆ. ಗಾಯತ್ರಿನಗರದಲ್ಲಿ ಮನೆಗಳಿಗೆ ಕಾಲುವೆ ನೀರು ನುಗ್ಗಿದ ಘಟನೆ ಕೂಡ ನಡೆದಿದೆ.
ಬೊಮ್ಮನಹಳ್ಳಿ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಕೂಡ ಮುನ್ನೆಚ್ಚರಿಕೆ ನೀಡಿದ್ದು, ಮುಂಗಾರು ಮಳೆ ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ಬೆಂಗಳೂರಲ್ಲೂ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂಗಾರು ಉತ್ತರ ಹಾಗೂ ಕರಾವಳಿ ಭಾಗಗಳಲ್ಲಿ ಸಾಮಾನ್ಯವಾಗಿದೆ. ರಾಜ್ಯದಾದ್ಯಂತ ಹಲವೆಡೆ ಮಳೆಯಾಗಿತ್ತು.
ಹವಾಮಾನ ಕೇಂದ್ರದ ತಜ್ಞರಾದ ಸದಾನಂದ ಅಡಿಗ ಅವರು ಮಾತನಾಡಿ, ಮೇಲ್ಮೈ ಸುಳಿಗಾಳಿ ಉತ್ತರ ಅಂಡಮಾನ್ ಸಮುದ್ರದ ಮೇಲೆ ಇರುವುದರಿಂದ, ಈ ತಿಂಗಳ 13ರ ಹೊತ್ತಿಗೆ ವಾಯುಭಾರ ಕುಸಿತವಾಗಲಿದೆ. ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ. ಅ.15ರಂದು ಉತ್ತರ ಆಂಧ್ರ ತಲುಪುವ ನಿರೀಕ್ಷೆಯಿದೆ.
ನಂತರ ವಾಯುಭಾರ ಕುಸಿತವಾಗಿ ಪ್ರಬಲಗೊಳ್ಳುವ ನಿರೀಕ್ಷೆಯಿದೆ. ಇನ್ನೊಂದು ಮೇಲ್ಮೈ ಸುಳಿಗಾಳಿ ಪೂರ್ವ ಮಧ್ಯ ಅರಬ್ಬೀ ಸಮುದ್ರದ ಮೇಲೆ ಸಮುದ್ರ ಮಟ್ಟದಿಂದ 3.1 ಕಿ.ಮೀ.ವರೆಗೆ ವಿಸ್ತರಿಸಿದೆ. ಇದರಿಂದಾಗಿ ದಟ್ಟ ಮೋಡ ಹಾದು ಹೋಗುತ್ತಿದೆ. ಉತ್ತರ ಒಳನಾಡು, ಆಂಧ್ರದ ಕರಾವಳಿ ಮೂಲಕ ಹಾದು ಹೋಗುತ್ತದೆ ಎಂದು ತಿಳಿಸಿದರು.