ಬೆಂಗಳೂರು:ರಾಜ್ಯದಲ್ಲಿ ಈ ವರ್ಷ ದಾಖಲೆ ಮಳೆಯಾಗಿದ್ದು, ಚಳಿಯ ಆಟ ಶುರುವಾಗಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಶೀತ ಅಧಿಕವಾಗಿದೆ. ರಾಜಧಾನಿಯಲ್ಲಿಂದು ಕನಿಷ್ಠ ತಾಪಮಾನ ದಾಖಲಾಗಿದ್ದು, ಜನರು ಬೆಳಗ್ಗೆ ಚಳಿಗೆ ನಡುಗುವಂತಾಗಿದೆ.
ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ಮೊದಲೆರಡು ವಾರಗಳಲ್ಲಿ ದಾಖಲೆ ಮಳೆ ಸುರಿದಿತ್ತು. ಈ ಹಿನ್ನೆಲೆ ಕಾರ್ತಿಕ ಮಾಸ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಚಳಿ ಕಾಣಿಸಿಕೊಂಡಿದೆ. ಬೆಳಗ್ಗೆ 8 ಗಂಟೆಯವರೆಗೂ ಚಳಿ ಕೊರೆಯುತ್ತಿದೆ. ಸಂಜೆ 6 ಗಂಟೆಯ ವೇಳೆ ವಾತಾವರಣ ತಂಡಿಯಿಂದ ಕೂಡಿದ್ದು, ತಾಪಮಾನ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ.
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ಬಯಲು ಪ್ರದೇಶಗಳಲ್ಲೂ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಧ್ಯಾಹ್ನದ ಹೊತ್ತು ಬಿಸಿಲಿದ್ದರೂ ತಂಪಾದ ಗಾಳಿ ಜೋರಾಗಿ ಬೀಸುತ್ತಿದ್ದು, ಚಳಿಯ ಅನುಭವವಾಗುತ್ತಿದೆ.