ಬೆಂಗಳೂರು:ನಗರದಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಕೂಡ ಮುಂದುವರೆದಿದೆ. ಸಂಜೆ 7 ಗಂಟೆ ಬಳಿಕ ಸತತ ಮಳೆಯಾಗುತ್ತಿದೆ. ನಾಳೆಯೂ ಸಹ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ನೀಡಿದೆ.
ಮಳೆಯಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಶಿವಾನಂದ ವೃತ್ತ, ಮಲ್ಲೇಶ್ವರ, ಎಂ.ಜಿ. ರಸ್ತೆ, ಡಬಲ್ ರೋಡ್, ಆನಂದ್‌ರಾವ್ ವೃತ್ತ, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ, ಶೇಷಾದ್ರಿಪುರಂ, ಸಹಿತ ಹಲವು ಬಡಾವಣೆಗಳಲ್ಲಿ ಮಳೆಯಾಗುತ್ತಿದೆ.
ಮಳೆ ಸುರಿದ ಕಾರಣ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಪರದಾಡುವಂತಾಗಿತ್ತು. ಒಕಳಿಪುರ ಕೆಳಸೇತುವೆ, ಶಿವಾನಂದ ವೃತ್ತ, ಕಾವೇರಿ ಜಂಕ್ಷನ್ ಸಹಿತ ಹಲವು ರಸ್ತೆಗಳು, ಕೆಳಸೇತುವೆಗಳಲ್ಲಿ ನೀರು ನಿಂತು ತೊಂದರೆ ಉಂಟಾಗಿದೆ.
ಭಾನುವಾರವೂ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಭಾರಿ ಮಳೆ : ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್, ಅಪಾರ ಬೆಳೆಹಾನಿ