ಕರ್ನಾಟಕ

karnataka

ETV Bharat / state

ಗುಡುಗುಸಹಿತ ಬಿರುಗಾಳಿ ಮಳೆ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನಗಳ ಮಾರ್ಗ ಬದಲು - flights diverted due to heavy rain

ದೇವನಹಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿಗೆ ಆಗಮಿಸುತ್ತಿದ್ದ 14 ವಿಮಾನಗಳು ಸಂಚಾರ ಮಾರ್ಗ ಬದಲಾಯಿಸಿವೆ.

Etv Bharat
ಗುಡುಗು ಸಹಿತ ಬಿರುಗಾಳಿ ಮಳೆ : ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಸಂಚಾರ ಮಾರ್ಗ ಬದಲಾವಣೆ

By

Published : Apr 4, 2023, 9:29 PM IST

Updated : Apr 4, 2023, 10:11 PM IST

ದೇವನಹಳ್ಳಿ : ದೇವನಹಳ್ಳಿಯಲ್ಲಿ ಸುರಿದ ಗುಡುಗು ಸಹಿತ ಜೋರು ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಒಟ್ಟು 14 ವಿಮಾನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದ್ದು, ಬೆಂಗಳೂರಿನಿಂದ ವಿವಿಧೆಡೆ ಸಂಚರಿಸಬೇಕಿದ್ದ 6 ವಿಮಾನಗಳು ತಡವಾಗಿ ಹೊರಟಿವೆ. ಬಿರುಗಾಳಿಸಹಿತ ಮಳೆಯಿಂದಾಗಿ ಸಂಜೆ 4.05 ರಿಂದ 4.50ರ ವರೆಗೆ ವಿಮಾನ ಸಂಚಾರ ವ್ಯತ್ಯಯವಾಗಿತ್ತು.

ಒಟ್ಟು 14 ವಿಮಾನಗಳ ಸಂಚಾರ ಮಾರ್ಗ ಬದಲಾಗಿದ್ದು, 12 ವಿಮಾನಗಳು ಚೆನ್ನೈನಲ್ಲಿ ಲ್ಯಾಂಡ್​ ಆಗಿವೆ. ಉಳಿದ 2 ವಿಮಾನಗಳು ಕೊಯಂಬತ್ತೂರು ಮತ್ತು ಹೈದರಾಬಾದ್​ನಲ್ಲಿ ಲ್ಯಾಂಡ್​ ಆಗಿದೆ. ಏಳು ಇಂಡಿಗೋ ವಿಮಾನಗಳು, 3 ವಿಸ್ತಾರ ವಿಮಾನಗಳು, 2 ಆಕಾಶ ಏರ್​ಲೈನ್ಸ್​​ , ತಲಾ ಒಂದೊಂದು ಗೋ ಏರ್​ ಮತ್ತು ಏರ್​ ಇಂಡಿಯಾ ವಿಮಾನಗಳ ಸಂಚಾರ ಮಾರ್ಗ ಬದಲಾಯಿಸಿವೆ. ಬೆಂಗಳೂರಿನಿಂದ ಪ್ರಯಾಣ ಬೆಳೆಸಬೇಕಿದ್ದ ಆರು ವಿಮಾನಗಳು ತಡವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೆನ್ನೈಯಲ್ಲಿ ಲ್ಯಾಂಡ್​​ ಆಗಿರುವ ವಿಮಾನಗಳು ಶೀಘ್ರದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಲಿದೆ. ಮತ್ತೆ ವಿಮಾನ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕೆಐಎಎಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಸತತ ಎರಡು ಗಂಟೆಗಳ ಕಾಲ ಬಿಟ್ಟುಬಿಡದೆ ಮಳೆ ಅಬ್ಬರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ವಾಹನ ಸವಾರರು ಹೈರಾಣಾದರು. ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ ದೇವನಹಳ್ಳಿ ಹೊರವಲಯದ ಬೆಂಗಳೂರು ರಸ್ತೆಯ ಕೆಂಪೇಗೌಡ ಸರ್ಕಲ್​ನಲ್ಲಿ ಸುಮಾರು ಮೂರ್ನಾಲ್ಕು ಅಡಿಯಷ್ಟು ಮಳೆ ನೀರು ನಿಂತಿತ್ತು. ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಮತ್ತು ಇತರೆ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ಪರದಾಡುವ ದೃಶ್ಯ ಕಂಡುಬಂತು. ಮಳೆಗೆ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್​ಗಳು ನೆಲಕ್ಕುರುಳಿದ್ದವು.

ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ. ಜನರಿಗೆ ಸುರಕ್ಷತೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೇವನಹಳ್ಳಿಯಲ್ಲಿ ಸಂಜೆ 45.2 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ. ದಿಢೀರ್​ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು ಸಂಚಾರ ವ್ಯತ್ಯಯ ಉಂಟಾಗಿತ್ತು. ಆದರೆ ನಗರದ ಹೃದಯಭಾಗದಲ್ಲಿ ಮಳೆಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ದೇವನಹಳ್ಳಿ ಸುತ್ತಮುತ್ತ ಬಿರುಗಾಳಿ‌ ಸಹಿತ ಭಾರಿ ಮಳೆ: ವಾಹನ ಸವಾರರು ಹೈರಾಣ

Last Updated : Apr 4, 2023, 10:11 PM IST

ABOUT THE AUTHOR

...view details