ಬೆಂಗಳೂರು: ನಗರದಲ್ಲಿ ಸದ್ಯ ಧಾರಾಕಾರ ಮಳೆಯಾಗುತ್ತಿದೆ. 8 ಗಂಟೆಯ ವೇಳೆಗೆ ವಿವಿಧ ಪ್ರದೇಶಗಳಲ್ಲಿ ಮಳೆ ಆರಂಭವಾಯಿತು. ನಿನ್ನೆ ಸಂಜೆಯೂ ಸಹ ಬೆಂಗಳೂರಿನಲ್ಲಿ ಜೋರು ಮಳೆಯಾಗಿತ್ತು. ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಭಾಗ ಸೇರಿದಂತೆ ಎಲ್ಲ ಸಿಲಿಕಾನ್ ಸಿಟಿಯ ದಿಕ್ಕುಗಳಲ್ಲೂ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ.
ವಿವಿಧ ಬಡಾವಣೆಗಳಲ್ಲಿ ಮಳೆ: ಹಲಸೂರು, ಮಡಿವಾಳ, ಬಿಟಿಎಂ ಲೇಔಟ್, ರಾಜಾಜಿನಗರ, ಯಶವಂತಪುರ, ಜೆ. ಪಿ ಪಾರ್ಕ್, ವಿದ್ಯಾರಣ್ಯಪುರ, ರಾಜಾಜಿನಗರ, ಮೆಜೆಸ್ಟಿಕ್, ಜಯನಗರ, ಹನುಮಂತನಗರ, ಮೈಸೂರು ರಸ್ತೆ, ವಿದ್ಯಾಪೀಠ, ಜೆ. ಪಿ ನಗರ, ಶಾಂತಿ ನಗರ, ಕೋರಮಂಗಲ, ಆರ್. ಆರ್. ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ.
ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ರಸ್ತೆಯಲ್ಲಿ ನೀರು ನುಗ್ಗಿದೆ. ಪರಿಣಾಮ ಸುಮಾರು 10ಕ್ಕೂ ಅಧಿಕ ಮನೆಗೆಳ ವಸ್ತುಗಳು ನೀರು ಪಾಲಾಗಿದೆ. ಅಲ್ಲದೇ, ಮನೆಯಲ್ಲಿದ್ದ ಫ್ರಿಡ್ಜ್, ಟಿವಿ ಸೇರಿ ಹಲವು ವಸ್ತುಗಳು ಹಾನಿಯಾಗಿವೆ.
ಕೆಲಸ ಮುಗಿಸಿ ಮನೆ ದಾರಿ ಹಿಡಿದ ಜನರಿಗೆ ನಿರಂತರವಾಗಿ ಸುರಿದ ಮಳೆಯಿಂದ ತೊಂದರೆಯಾಗಿದೆ. ಅಲ್ಲದೇ, ಮಳೆಯಲ್ಲಿ ಮನೆ ಸೇರಲಾಗದೆ, ಇತ್ತ ಕಾಯಲಾಗದೆ ಬೈಕ್ ಸವಾರರು ಪರದಾಟ ನಡೆಸಿದ್ದಾರೆ. ನಿನ್ನೆ ದೀಪಾಂಜಲಿ ನಗರದಲ್ಲಿ ಕರೆಂಟ್ ತಂತಿ ತಗುಲಿ ಯುವಕ ವಸಂತ್ ಮೃತಪಟ್ಟಿದ್ದರು. ಹೀಗಾಗಿ ಇಂದು ಮುನ್ನೆಚ್ಚರಿಕೆ ಕ್ರಮವಾಗಿ ಬೆಸ್ಕಾಂನವರು ಕರೆಂಟ್ ಕಟ್ ಮಾಡಿದ್ದಾರೆ. ಮಲ್ಲೇಶ್ವರಂ, ಗುಟ್ಟಳ್ಳಿ, ವಸಂತನಗರ, ಶೇಷಾದ್ರಿ ರಸ್ತೆ ಕೆಲವು ಕಡೆ ಮಳೆ ಬೀಳುತ್ತಿರುವ ಕಾರಣದಿಂದಾಗಿ ಪವರ್ ಕಟ್ ಆಗಿದೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ ಮನೆಗೆ ಸಚಿವ ನಿರಾಣಿ ಭೇಟಿ: ವೈಯಕ್ತಿಕ ₹5 ಲಕ್ಷ ಪರಿಹಾರ ವಿತರಣೆ