ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತ ಪಟ್ಟಿದ್ದ ಯುವಕನ ಹೃದಯವನ್ನು ಆತನ ಕುಟುಂಬದವರು ದಾನ ಮಾಡಿದ್ದಾರೆ. ಇಂದು ಬೆಂಗಳೂರಿನ ಜೆ ಪಿ ನಗರದ ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಹೃದಯದ ಕಸಿ ಮಾಡುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಮೂಲಕ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.
ಬಾಲಕಿಯೊಬ್ಬಳಿಗೆ ಶೀಘ್ರದಲ್ಲೇ ಹೃದಯ ಕಸಿ.. ಕಳೆದ ಮೂರು ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕೊಪ್ಪಳ ಮೂಲದ ಗಂಗಾವತಿಯ ಬಾನುಲೇಖ ಎಂಬ 6ನೇ ತರಗತಿಯ ವಿದ್ಯಾರ್ಥಿನಿ ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೃದಯದ ಕಸಿ ಮಾಡುವ ಬಗ್ಗೆ ವೈದ್ಯರ ತಂಡದ ಜೊತೆ ಚರ್ಚಿಸಿ ಬಾಲಕಿಯ ಹೃದಯಕ್ಕೆ ಸರಿ ಹೊಂದುವ ಹೃದಯಕ್ಕಾಗಿ ಕಳೆದ ಮೂರು ತಿಂಗಳಿನಿಂದ ಕಾಯುತ್ತಿದ್ದರು. ನಿನ್ನೆ ಸಂಜೆ ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದ ಯುವಕನ ಪೋಷಕರು ಆತನ ಅಂಗಾಂಗಗಳ ದಾನ ಮಾಡಿದ್ದರು.
ಇಂದು ಜೆ ಪಿ ನಗರದ ಆಸ್ಟರ್ ಆಸ್ಪತ್ರೆಯಲ್ಲಿದ್ದ ಮೃತನ ಹೃದಯವನ್ನು ಆ್ಯಂಬುಲೆನ್ಸ್ ಹಾಗೂ ಪೊಲೀಸರ ಸಹಾಯದಿಂದ 25 ನಿಮಿಷದಲ್ಲಿ 31 ಕಿಲೋಮೀಟರ್ ತಲುಪಿಸಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.