ಬೆಂಗಳೂರು:ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜಭವನ ಮುತ್ತಿಗೆ ವೇಳೆ ಕಾಂಗ್ರೆಸ್ ಕಾರ್ಯಕರ್ತನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿನಿ ಲೇಔಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ರಾಮಕೃಷ್ಣ ಹೃದಯಾಘಾತಕ್ಕೆ ಒಳಗಾದ ಕಾರ್ಯಕರ್ತ ಎಂದು ತಿಳಿದುಬಂದಿದೆ.
ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿ ಬಸ್ನಲ್ಲಿ ಕುಳಿತಿದ್ದ ರಾಮಕೃಷ್ಣ ಹೃದಯಘಾತ ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇಂಡಿಯನ್ ಎಕ್ಸ್ಪ್ರೆಸ್ ಸಮೀಪವೇ ಇರುವ ಫೋರ್ಟಿಸ್ ಆಸ್ಪತ್ರೆಗೆ ರಾಮಕೃಷ್ಣ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿಭಟನಾ ಮೆರವಣಿಗೆ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಸ್ಪತ್ರೆಗೆ ಭೇಟಿ ನೀಡಿ ರಾಮಕೃಷ್ಣ ಆರೋಗ್ಯ ವಿಚಾರಿಸಿದ್ದಾರೆ. ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ಅನಗತ್ಯವಾಗಿ ವಿಚಾರಣೆ ನಡೆಸುತ್ತಿದೆ ಎಂದು ಆರೋಪಿಸಿ, ರಾಜಭವನ ಮುತ್ತಿಗೆಗೆ ಕಾಂಗ್ರೆಸ್ ನಾಯಕರು ಯತ್ನಿಸಿದ್ದರು.
ಆದರೆ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗಮಧ್ಯವೇ ತಡೆದು ವಶಕ್ಕೆ ಪಡೆದಿದ್ದರು. ಈ ಮೆರವಣಿಗೆ ವೇಳೆ ಸಾಕಷ್ಟು ಕಾರ್ಯಕರ್ತರಿಗೂ ಗಾಯಗಳಾಗಿವೆ. ಸಾಕಷ್ಟು ಮಂದಿ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದು, ಈ ವೇಳೆ ಉಂಟಾದ ನೂಕುನುಗ್ಗಾಟದಲ್ಲಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:'ಅಗ್ನಿಪಥ್' ಯೋಜನೆಗೆ ಖಂಡನೆ: ಹರಿಯಾಣದಲ್ಲಿ ಡಿಸಿ ಮನೆಗೆ ಕಲ್ಲು, ವಾಹನಗಳಿಗೆ ಬೆಂಕಿ