ಬೆಂಗಳೂರು : ವೀರಶೈವ - ಲಿಂಗಾಯತ ಅಭಿವೃದ್ಧಿ ಮಂಡಳಿ ಹಾಗೂ ಮರಾಠ ಅಭಿವೃದ್ದಿ ನಿಗಮದ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೊರಡಿಸಿರುವ ಟಿಪ್ಪಣಿ ಹಾಗೂ ಪತ್ರದ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಜಾತಿ ಆಧರಿತ ನಿಗಮ- ಮಂಡಳಿಗಳನ್ನು ಸ್ಥಾಪಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿ, ಸರ್ಕಾರ ನಿಗಮ-ಮಂಡಳಿ ರಚನೆಯು ‘ನೀತಿ ನಿರ್ಣಯ’ ವಿಚಾರ ಎಂದು ಹೇಳಿದೆ. ಆದರೆ, ಯಾವ ನೀತಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಜಾತಿಗಳ ಅಭಿವೃದ್ಧಿಗೆ ನಿಗಮ-ಮಂಡಳಿ ರಚಿಸಲು ಯಾವ ನೀತಿಯೂ ಇಲ್ಲ, ನಿರ್ದಿಷ್ಟ ಕಾನೂನಿನ ತಳಹದಿ, ಅಧಿಕೃತ ಆದೇಶ, ಸಚಿವ ಸಂಪುಟದ ನಿರ್ಣಯಗಳು ಯಾವುವೂ ಇಲ್ಲದೇ ಲಿಂಗಾಯತ, ಮರಾಠ ಅಭಿವೃದ್ಧಿ ನಿಗಮ-ಮಂಡಳಿ ರಚನೆಗೆ 2020ರ ನ.17 ಹಾಗೂ ನ.27ರಂದು ಮುಖ್ಯಮಂತ್ರಿ ಟಿಪ್ಪಣಿ ಹೊರಡಿಸಿದ್ದಾರೆ. ಆ ಟಿಪ್ಪಣಿ ಆಧರಿಸಿ ಕೇವಲ ಜಾತಿ ಕಾರಣಕ್ಕಾಗಿಯೇ ನಿಗಮ-ಮಂಡಳಿ ರಚಿಸಲಾಗಿದೆ ಎಂದರು.