ಬೆಂಗಳೂರು :ಕಳೆದ ಇಪ್ಪತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಾಸಿಕ ವೇತನವನ್ನು 12 ಸಾವಿರಕ್ಕೆ ನಿಗದಿಗೊಳಿಸುವಂತೆ ಒತ್ತಾಯಿಸಿ, 20ನೇ ದಿನವಾದ ಇಂದು ನಗರದ ಮೌರ್ಯ ಸರ್ಕಲ್ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಸ್ಥಳಕ್ಕೆ ಆರೋಗ್ಯ ಸಚಿವ ಶ್ರೀ ರಾಮುಲು ಭೇಟಿ ನೀಡಿ ಮನವಿ ಆಲಿಸಿದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ ವೇತನ ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ, ಇಂದು ಮತ್ತೊಮ್ಮೆ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ಹಿನ್ನೆಲೆ ಆಶಾ ಕಾರ್ಯಕರ್ತೆಯರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು. ಬೇಡಿಕೆ ಈಡೇರದಿದ್ರೆ ಮತ್ತೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಬಹಳಷ್ಟು ಒಳ್ಳೆಯ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಹಲ್ಲೆಯಾದಂತಹ ಸಂದರ್ಭದಲ್ಲೂ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ನಿನ್ನೆಯೂ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿಯವರನ್ನು ಮುಖ್ಯಮಂತ್ರಿಗಳು ಕರೆದು ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ಅವರ ಬೇಡಿಕೆಯಂತೆ ತಿಂಗಳಿಗೆ ಹನ್ನೆರಡು ಸಾವಿರ ನಿಗದಿ ಮಾಡಲು ಚಿಂತನೆ ಮಾಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ನೀಡಿದಾಗ ಹೆಚ್ಚಿನ ಹೊರೆಯಾಗುವುದಿಲ್ಲ. ಹೀಗಾಗಿ ಮತ್ತೆ ಸಿಎಂ ಜೊತೆ ಚರ್ಚೆ ಮಾಡಿ, ತಿಂಗಳಿಗೆ ಹನ್ನೆರಡು ಸಾವಿರ ರೂಪಾಯಿ ನಿಗದಿ ಮಾಡಲು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.