ಬೆಂಗಳೂರು:ನೀಟ್ ಪರೀಕ್ಷೆ ಕೇಂದ್ರ ಸರ್ಕಾರದ ನಿಯಮಾವಳಿ ಮೂಲಕ ನಡೆಯುತ್ತಿದೆ. ದೇಶಕ್ಕೆ ಏಕರೂಪ ಪ್ರವೇಶ ಪರೀಕ್ಷೆ ಮಾಡಲು ನೀಟ್ ವ್ಯವಸ್ಥೆ ಮಾಡಿದ್ದು, ಇದರಲ್ಲಿ ಪಾಸ್ ಆದವರಿಗೆ ಸೀಟು ಸಿಗದಿರುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿ ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ಅವರ ಆಯ್ಕೆಯ ಕಾಲೇಜಿನಲ್ಲಿ ಆಯ್ಕೆಯ ವಿಷಯದಲ್ಲಿ ಉನ್ನತ ವೈದ್ಯಕೀಯ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದ ಅಸಹಾಯಕವಾಗಿರುವ ಸ್ಥಿತಿ ಬಂದಿದೆ ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮೆರಿಟ್ ಮತ್ತು ಮೀಸಲು ಅನ್ವಯ ನಡೆಸುತ್ತಿದೆ. ಇಲ್ಲಿಯವರೆಗೂ ನೀಟ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಸೀಟು ದೊರಕಿದೆ. ಒಂದೊಮ್ಮೆ ದೊರೆತಿರುವ ಸೀಟು ಇಷ್ಟವಾಗದಿದ್ದಲ್ಲಿ ವಿದ್ಯಾರ್ಥಿ ಆಯ್ಕೆಗೆ ಅನುಸಾರವಾಗಿ ಕೋರ್ಸ್ ಬದಲಾಯಿಸಲು ಅವಕಾಶವಿರುತ್ತದೆ. ಇಲ್ಲಿಯವರೆಗೂ ಈ ರೀತಿಯ ಯಾವುದೇ ಸಮಸ್ಯೆ ರಾಜ್ಯದಲ್ಲಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನೀಟ್ನಲ್ಲಿ ಉತೀರ್ಣ ಆಗದವರು ವಿದೇಶಕ್ಕೆ ಹೋಗಿ ಓದುವುದು ತಪ್ಪಲ್ಲ. ಇಡೀ ವಿಶ್ವದಲ್ಲಿ ವೈದ್ಯಕೀಯ ಶಿಕ್ಷಣ ತುಟ್ಟಿಯಾಗಿದೆ. ಇದು ಕೇವಲ ರಾಜ್ಯದಲ್ಲಿ ಅಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಇನ್ನು ಅವಕಾಶ ಮಾಡಿ ಕೊಡಲಾಗಿಲ್ಲ. ಶೇ.10ರಷ್ಟು ಮೀಸಲಾತಿ ನೀಡುವ ಬಗ್ಗೆ ಈ ವರ್ಷದಿಂದ ಅನ್ವಯವಾಗುವಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಆಹಾರ ಪದಾರ್ಥ ಕಲಬೆರಕೆ ವಿರುದ್ಧ ಕ್ರಮ:ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಆಹಾರ ಕಲಬೆರಕೆ ವಿಚಾರ ಕುರಿತು ಕಾಂಗ್ರೆಸ್‌ನ ತಿಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಸರ್ಕಾರದ ಗಮನಕ್ಕೆ ಬಂದಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಸುಮಾರು 597 ಪ್ರಕರಣ ದಾಖಲಿಸಿ 23.88 ಲಕ್ಷ ದಂಡ ವಸೂಲು ಮಾಡಲಾಗಿದೆ. ಕಲಬೆರಕೆ ತಡೆಯಲು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಆಹಾರ ಕಲಬೆರಕೆಯ ಪತ್ತೆ ಕಾರ್ಯಕ್ಕೆ 424 ಸಿಬ್ಬಂದಿ ಇರಬೇಕಿತ್ತು.