ಬೆಂಗಳೂರು:ಬೆಂಗಳೂರಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಮಿಕ್ರೋನ್ ಸೋಂಕು ಪತ್ತೆಯಾದ ವಿಷಯಕ್ಕೆ ಸಂಧಿಸಿದಂತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್ ಎರಡೂ ಪ್ರಕರಣ ರಾಜ್ಯದಲ್ಲಿ ಪತ್ತೆ ಮಾಡಿದ್ದೇವೆ. ದಕ್ಷಿಣ ಆಫ್ರಿಕಾದಿಂದ ಬಂದ 66 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಆಫ್ರಿಕಾದಿಂದ ಬಂದ ಇವರಿಗೆ ಅರ್ಬನ್ PHC ಟೆಸ್ಟ್ ಮಾಡಿಸಿದಾಗ ರೋಗದ ಲಕ್ಷಣ ಇರಲಿಲ್ಲ. ನವೆಂಬರ್. 23ರಂದು ಪರೀಕ್ಷಿಸಿದಾಗ ನೆಗೆಟಿವ್ ಬಂದಿದೆ. ಅವರು ನವೆಂಬರ್ .27ರಂದು ದುಬೈಗೆ ಹೋಗಿದ್ದಾರೆ. ಅವರನ್ನು ಟ್ರೇಸ್ ಮಾಡಿದ್ದು, ಈ ವ್ಯಕ್ತಿ ಸುಮಾರು 247 ಪ್ರಾಥಮಿಕ ಸಂಪರ್ಕಗಳನ್ನು ಹೊಂದಿದ್ದಾರೆ. ಸದ್ಯ ವ್ಯಕ್ತಿ ಪರೀಕ್ಷಾ ವರದಿಯೂ ಪಾಸಿಟಿವ್ ಬಂದಿದ್ದು, ಐಸೋಲೇಟ್ ಆಗಿದ್ದಾರೆ. ಇನ್ನುಳಿದವರಿಗೆ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದೆ ಎಂದರು.
45 ವರ್ಷದ ವ್ಯಕ್ತಿಗೆ ಟ್ರಾವೆಲ್ ಹಿಸ್ಟರಿ ಇಲ್ಲ
ಸೋಂಕು ತಗುಲಿರುವ ಎರಡನೇ ವ್ಯಕ್ತಿ 45 ವರ್ಷದ ವೈದ್ಯರಾಗಿದ್ದು, ಇವರ ಟ್ರಾವೆಲ್ ಹಿಸ್ಟರಿ ಇಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ಟೆಸ್ಟ್ ಮಾಡಿದ್ದು, ಇವರ ಸಂಪರ್ಕದಲ್ಲಿದ್ದ ಐದು ಜನರಿಗೆ ಪಾಸಿಟಿವ್ ಬಂದಿದೆ. ವೈದ್ಯ ಮತ್ತು ಐವರನ್ನು ಐಸೋಲೇಟ್ ಮಾಡಿದ್ದೇವೆ. ಸತತವಾಗಿ ಸಂಪರ್ಕದಲ್ಲಿದ್ದೇನೆ. ಯಾರಿಗೂ ಗಂಭೀರ ಸ್ಥಿತಿ ಇಲ್ಲ. ಅನುಮಾನ ಬಂದು ಇಬ್ಬರ ಸ್ಯಾಂಪಲ್ಗಳನ್ನು ಜಿನೋಮಿಕ್ ಸೀಕ್ವೆನ್ಸ್ ಕಳಿಸಲಾಗಿತ್ತು. ಆಗ ಒಮಿಕ್ರೋನ್ ಪತ್ತೆಯಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.