ಆನೇಕಲ್:ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಜೋಡಣೆಗೆ ರಾಜ್ಯ ಸರ್ಕಾರ ನೆರವು ನೀಡಿರುವುದರ ಕುರಿತು ಪರಿಶೀಲಿಸಲು ಖುದ್ದು ಆರೋಗ್ಯ ಸಚಿವರೇ ಆಸ್ಪತ್ರೆಗೆ ಭೇಟಿ ನೀಡಿದರು.
ಸರ್ಕಾರಿ ಯೋಜನೆಯಡಿ ಮೊದಲ ಹೃದಯ ಜೋಡಣೆಗೊಳಗಾದ ರೋಗಿ ಭೇಟಿ ಮಾಡಿದ ಸಚಿವ ಶ್ರೀರಾಮುಲು - Hearttransplantnews
ಸರ್ಕಾರಿ ಯೋಜನೆಯಡಿ ಮೊದಲ ಹೃದಯ ಜೋಡಣೆಗೊಳಗಾದ ರೋಗಿಯನ್ನು ಆರೋಗ್ಯ ಸಚಿವ ಶ್ರೀರಾಮುಲು ಖುದ್ದು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದಾರೆ.
ಅಂಗಾಂಗ ಕಸಿ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರ ಚಿಕಿತ್ಸೆಗೆ ಸರ್ಕಾರ ಮುಂದಾಗಿದ್ದು, ಈ ಯೋಜನೆಯ ಮೊದಲ ಫಲಾನುಭವಿ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಚೇತರಿಸಿಕೊಳ್ಳುತ್ತಿರುವ ಬಾಗಲಕೋಟೆಯ ಸಂಜು ಹೊಸಮನಿ(34) ಎಂಬುವರನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಅಂಗಾಂಗ ಜೋಡಣೆ ಎಂಬುದು ಗಗನಕುಸುಮವಾಗಿತ್ತು. ಈ ಹಿನ್ನೆಲೆ ಸರ್ಕಾರದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಸಂಪೂರ್ಣ ಹಣ ಕೊಡುವುದರ ಮೂಲಕ ಬಡವರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಬಾಗಲಕೋಟೆಯ ಸಂಜು ಎಂಬುವವರಿಗೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ್ದ 28 ವರ್ಷದ ಯುವಕನ ಹೃದಯವನ್ನು ನಾರಾಯಣ ಹೃದಯಾಲಯದ ಡಾ. ವರುಣ್ ಶೆಟ್ಟಿ, ಡಾ. ಜೂಲಿಯಸ್ ಪುನ್ನೇನ್ ನೇತೃತ್ವದ ತಂಡ ಜೋಡಣೆ ಮಾಡಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ಹಿನ್ನೆಲೆ ಅಂಗಾಂಗ ಕಸಿಗಾಗಿ ಕಾದಿರುವ ಬಡವರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದಲ್ಲಿ ನೋಂದಾಯಿತ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಸುಮಾರು 10 ಲಕ್ಷದವರೆಗೆ ಸರ್ಕಾರ ಹಣ ನೀಡಲಿದೆ ಎಂದರು.