ಬೆಂಗಳೂರು:ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ನಮ್ಮ ಕ್ಲಿನಿಕ್ಗಳಿಗೆ ಆರೋಗ್ಯ ಸಚಿವರು ಜನಸ್ನೇಹಿ ಸ್ಪರ್ಶ ನೀಡಿದ್ದು, ಕ್ಲಿನಿಕ್ಗಳ ಸಮಯ ಬದಲಾವಣೆ ಮಾಡಿ ಸಂಜೆ ವೇಳೆಯೂ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಕ್ಲಿನಿಕ್ಗಳ ಪೈಕಿ ಶೇಕಡಾ 25ರಷ್ಟು ನಮ್ಮ ಕ್ಲಿನಿಕ್ಗಳ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಸಂಜೆ 4.30ಕ್ಕೆ ಬಾಗಿಲು ಮುಚ್ಚುತ್ತಿದ್ದ ನಮ್ಮ ಕ್ಲಿನಿಕ್ಗಳು ಇನ್ನು ಮುಂದೆ ರಾತ್ರಿ 8 ಗಂಟೆಯ ತನಕ ಚಿಕಿತ್ಸೆ ನೀಡಲಿವೆ.
ನಗರ ಪ್ರದೇಶಗಳಲ್ಲಿನ ಬಡವರು ಮತ್ತು ಕಡುಬಡವರಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಹಲವಾರು ವಿಭಿನ್ನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಇದರ ಒಂದು ಭಾಗವಾಗಿ ನಮ್ಮ ಕ್ಲಿನಿಕ್ಗಳನ್ನು ನಂ 1 ಕ್ಲಿನಿಕ್ಗಳನ್ನಾಗಿ ಮಾರ್ಪಡಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.
ರಾತ್ರಿ 8 ಗಂಟೆವರೆಗೆ ಕ್ಲಿನಿಕ್ ಓಪನ್:ರಾಜ್ಯದಲ್ಲಿ 415 ನಮ್ಮ ಕ್ಲಿನಿಕ್ಗಳಿದ್ದು, ಇವುಗಳಲ್ಲಿ ಶೇಕಡಾ 25ರಷ್ಟು ಕ್ಲಿನಿಕ್ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಸಚಿವರು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ. ಈ ಕ್ಲಿನಿಕ್ಗಳು ಬೆಳಗ್ಗೆ 9 ಗಂಟೆಗೆ ಬಾಗಿಲು ತೆಗೆದು ಮಧ್ಯಾಹ್ನ 12.30ಕ್ಕೆ ಮುಚ್ಚಲ್ಪಡುತ್ತಿದ್ದವು. ಮಧ್ಯಾಹ್ನ ಊಟದ ಬಳಿಕ 2 ಗಂಟೆಗೆ ಬಾಗಿಲು ತೆರೆದು ಸಂಜೆ 4.30ಕ್ಕೆ ಬಂದ್ ಆಗುತ್ತಿದ್ದವು. ಈ ಸಮಯದಿಂದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತಿರಲಿಲ್ಲ. ಬಹಳಷ್ಟು ರೋಗಿಗಳು ಆಸ್ಪತ್ರೆಗೆ ಬಂದು ಬಾಗಿಲು ಮುಚ್ಚಿರುವುದನ್ನು ನೋಡಿಕೊಂಡು ವಾಪಸ್ ತೆರಳಬೇಕಾಗಿತ್ತು.
ಬೆಳಗ್ಗೆ 9 ಗಂಟೆಯ ಬದಲಿಗೆ ಅಪರಾಹ್ನ 12 ಗಂಟೆಗೆ ಪ್ರಾರಂಭಗೊಂಡು, ರಾತ್ರಿ 8 ಗಂಟೆಯ ತನಕ ನಮ್ಮ ಕ್ಲಿನಿಕ್ಗಳು ತೆರೆದಿರಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಬಂದ ಬಳಿಕವೂ ಚಿಕಿತ್ಸೆ ದೊರೆಯುವಂತೆ ನಮ್ಮ ಕ್ಲಿನಿಕ್ಗಳ ಸಮಯ ಬದಲಾವಣೆ ಮಾಡಲಾಗುತ್ತಿದೆ. ರಾತ್ರಿಯವರೆಗೂ ಕ್ಲಿನಿಕ್ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.