ಬೆಂಗಳೂರು:ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದ್ದು, ಕಳೆದ 1 ವರ್ಷದಲ್ಲಿ ಆರೋಗ್ಯ ಮೂಲಸೌಕರ್ಯ ಚುರುಕುಗೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಕೋವಿಡ್ ಸಂಕಷ್ಟದ ಬೆನ್ನಲ್ಲೇ ಆಕ್ಸಿಜನ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ನಿತ್ಯ ಸುಮಾರು 2 ಲಕ್ಷ ಕೋವಿಡ್ ಟೆಸ್ಟ್ ಮಾಡುವ ಸಾಮರ್ಥ್ಯ ಅಭಿವೃದ್ಧಿಪಡಿಸಲಾಗಿದೆ. 1,015 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯವಿದ್ದು, 22ಸಾವಿರಕ್ಕೂ ಹೆಚ್ಚು ಬೆಡ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಸಮರ್ಪಕ ಔಷಧ ಪೂರೈಸಲಾಗುತ್ತಿದೆ. ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಸುಧಾಕರ್ ಕೊರೊನಾ ನಿರ್ವಹಣೆ ಬಗ್ಗೆ ನೀಡಿರುವ ಮಾಹಿತಿ
ಕೊರೊನಾ ಪರೀಕ್ಷೆ ಹೆಚ್ಚಳ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಒಗ್ಗಟ್ಟಿನ ಕಾರ್ಯನಿರ್ವಹಣೆಯಿಂದ ಕೊರೊನಾ 2ನೇ ಅಲೆಯ ತೀವ್ರತೆ ಮಧ್ಯೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೇ 22 ರವರೆಗೆ 2 ಕೋಟಿ 38 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಾಜ್ಯದಲ್ಲಿ ಶೇ 80ಕ್ಕಿಂತ ಹೆಚ್ಚು RTPCR ಪರೀಕ್ಷೆ ಮಾಡಿದ್ದೇವೆ. ರಾಜ್ಯಾದ್ಯಂತ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದುಪ್ಪಟ್ಟಾಗಿದೆ. ಕೋವಿಡ್ ಸಂಕಷ್ಟದ ಬೆನ್ನಲ್ಲೇ ಆಕ್ಸಿಜನ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಸುಮಾರು 2 ಲಕ್ಷ ಕೋವಿಡ್ ಟೆಸ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. 2020 ಫೆಬ್ರವರಿಯಲ್ಲಿ 2 ಲ್ಯಾಬ್ಗಳಿದ್ದವು. ಆದರೆ ಈಗ 241 ಲ್ಯಾಬ್ ಇವೆ. ಮೇ 22ರವರೆಗೆ 1 ಕೋಟಿ 20 ಲಕ್ಷ 14 ಸಾವಿರ 15 ಜನರಿಗೆ ಲಸಿಕೆ ನೀಡಲಾಗಿದೆ. ಆರ್ಥಿಕ ಸಂಕಷ್ಟದ ನಡುವೆ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯನ್ನು ಸರ್ಕಾರ ಕೈಗೊಂಡಿದೆ.
ವೈದ್ಯಕೀಯ ಆಮ್ಲಜನಕ
ರಾಜ್ಯದಲ್ಲಿ 815 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಸರ್ಕಾರದಿಂದ 1,015 ಟನ್ ಹಂಚಿಕೆಯಾಗಿದೆ. ಯಾದಗಿರಿ, ಕೆಜಿಎಫ್ನಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಡಿಆರ್ಡಿಒ ನೆರವಿನಲ್ಲಿ 1,000 ಎಲ್‍ಪಿಎಂ ಸಾಮರ್ಥ್ಯದ ಮೂರು ಆಕ್ಸಿಜನ್ ಘಟಕಗಳನ್ನು ಸಿವಿ ರಾಮನ್ ಆಸ್ಪತ್ರೆ, ಕಲಬುರಗಿಯ ಇಎಸ್‍ಐ ಮೆಡಿಕಲ್ ಕಾಲೇಜು, ಕೊಪ್ಪಳ ಮೆಡಿಕಲ್ ಸೈನ್ಸಸ್ ಸಂಸ್ಥೆಯಲ್ಲಿ ಆರಂಭಿಸಲಾಗುತ್ತಿದೆ. ಬಳ್ಳಾರಿಯಲ್ಲಿ 1,000 ಆಕ್ಸಿಜನ್ ಹಾಸಿಗೆಯುಳ್ಳ ಆಸ್ಪತ್ರೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವು 600 ಎಲ್‍ಪಿಎಂ ಸಾಮರ್ಥ್ಯದ 6 ಪಿಎಸ್‍ಎ ಘಟಕ ಆರಂಭಕ್ಕೆ ಅನುಮೋದನೆ ನೀಡಿದೆ. 10 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಸುಮಾರು 1000 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆಯಾಗಿದೆ.