ಬೆಂಗಳೂರು: ಕೆಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಂಡಿದ್ದು, ಕೆಲವೆಡೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಹಣಕಾಸು ಲಭ್ಯತೆಯನುಸಾರ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಬ್ಬಾರ್ ಸಾಬ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಸ್ಪತ್ರೆಗಳಲ್ಲಿ ಮೂರನೇ ಹಂತದ ಆರೋಗ್ಯ ಸೇವೆ ಸಿಗುತ್ತದೆ. ಹೊಸ ತಾಲ್ಲೂಕುಗಳಲ್ಲಿ ಆಸ್ಪತ್ರೆ ಸ್ಥಾಪನೆ ಆಗಬೇಕಿದೆ. ಎಲ್ಲಾ ಪಿಹೆಚ್ಸಿಗಳನ್ನು 24/7 ಸೇವೆ ಸಿಗುವಂತೆ ಮಾಡಲಾಗುತ್ತದೆ. ಅಗತ್ಯ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕುಂದು ಕೊರತೆ ಆಲಿಸಲು ವ್ಯವಸ್ಥೆ ಇದೆ. ಯಾರೇ ದೂರು ನೀಡಿದಲ್ಲಿ 15 ದಿನದಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.
ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ, ಸ್ಕ್ಯಾನಿಂಗ್ ಯಂತ್ರ ಅಳವಡಿಕೆ ಮಾಡಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಕೆಲವೆಡೆ ಕಾಮಗಾರಿ ನಡಿತಾ ಇದೆ. ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಚಿಂತನೆ ಇದೆ ಎಂದು ಹೇಳಿದರು.
ಈ ವರ್ಷದಲ್ಲೇ 438 ನಮ್ಮ ಕ್ಲಿನಿಕ್ ಆರಂಭ- ಪ್ರಸಕ್ತ ಸಾಲಿನಲ್ಲಿಯೇ ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಗಳು ಕಾರ್ಯಾರಂಭ ಮಾಡಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಸಿಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಕ್ಲಿನಿಕ್ ಅನ್ನು ಕೊಳಗೇರಿ ಮತ್ತು ದುರ್ಬಲ ವರ್ಗದ ಜನರಿರುವ ಕಡೆ ಸ್ಥಾಪಿಸುವ ಚಿಂತನೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಇವೆ. 107 ಕಡೆ ಮಾತ್ರ ಕಡಿಮೆ ಇವೆ. ಅಲ್ಲಿಯೇ ಜನಸಂಖ್ಯೆಗೆ ತಕ್ಕಂತೆ ಆರೋಗ್ಯ ಕೇಂದ್ರ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
438 ನಮ್ಮ ಕ್ಲಿನಿಕ್ಗಳ ರಚನೆ ಮಾಡಲಾಗಿದೆ. 243 ಬಿಬಿಎಂಪಿ 195 ಇತರ ಜಿಲ್ಲೆಗಳಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ ಅಂತ್ಯದ ಒಳಗೆ 438 ನಮ್ಮ ಕ್ಲಿನಿಕ್ ಗಳು ಆರಂಭಗೊಳ್ಳಲಿವೆ. ಅಗತ್ಯ ಸಿಬ್ಬಂದಿ, ಉಪಕರಣ ವ್ಯವಸ್ಥೆ ಕಲ್ಪಿಸಿ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಹೇಳಿದರು.
1.5 ವರ್ಷದಲ್ಲಿ 2 ಸಾವಿರ ವೈದ್ಯರ ನೇಮಕಾತಿಯಾಗಿದೆ. ಕೆಲವೇ ಕೆಲವು ಪಿಹೆಚ್ಸಿಗಳಲ್ಲಿ ಮಾತ್ರ ಕೊರತೆ ಇದೆ. ಬಹುತೇಕ ಕಡೆ ಅಗತ್ಯ ಸಿಬ್ಬಂದಿ ಇದೆ. ಕಡ್ಡಾಯ ಗ್ರಾಮೀಣ ಸೇವೆ ಅಡಿ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. 1 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 4000 ವೈದ್ಯಕೀಯ ಸಿಬ್ಬಂದಿಯನ್ನು ನಮ್ಮ ಕ್ಲಿನಿಕ್ ಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಸ್ವಾಯತ್ತ ಸಂಸ್ಥೆಗಳಲ್ಲಿ ಪಿಂಚಣಿ ವ್ಯವಸ್ಥೆ: ರಾಜ್ಯದಲ್ಲಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿಗೆ ಪಿಂಚಣಿ ಯೋಜನೆ ಮರಳಿ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತಿಳಿಸಿದ್ದಾರೆ.