ಕರ್ನಾಟಕ

karnataka

ETV Bharat / state

ಮತ್ತೊಮ್ಮೆ ಲಾಕ್​​​​ಡೌನ್ ಮಾಡಲು ಸಾಧ್ಯವಿಲ್ಲ, ಇಷ್ಟವೂ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ - ಲಾಕ್ ಡೌನ್ ಕುರಿತು ಸಚಿವ ಸುಧಾಕರ್ ಹೇಳಿಕೆ

ನಮಗೆ ಯಾರಿಗೂ ಮತ್ತೆ ಲಾಕ್​ ಡೌನ್​ ಮಾಡಬೇಕೆಂಬ ಉದ್ದೇಶವಿಲ್ಲ. ಆದರೆ, ಕೋವಿಡ್ ನಿಯಂತ್ರಣಕ್ಕೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಎಫ್​ಕೆಸಿಸಿಐ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Health Minister Clarification on Lock down
ಆರೋಗ್ಯ ಸಚಿವ ಡಾ.ಕೆ ಸುಧಾಕರ್

By

Published : Apr 15, 2021, 8:15 PM IST

ಬೆಂಗಳೂರು: ಮತ್ತೆ ಲಾಕ್ ಡೌನ್ ಪರಿಸ್ಥಿತಿ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಇಷ್ಟವೂ ಇಲ್ಲ. ನಾವು ಲಾಕ್ ಡೌನ್ ಅನಿವಾರ್ಯ ಪರಿಸ್ಥಿತಿ ತಂದುಕೊಳ್ಳುವುದು ಬೇಡ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.

ಎಫ್​ಕೆಸಿಸಿಐನಲ್ಲಿ ನಡೆದ ಕೋವಿಡ್ -19 ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಉದ್ಯಮಿಗಳು ಸಿಎಸ್​ಆರ್ ಮೂಲಕ ಕೋವಿಡ್ -19 ಕುರಿತು ಜಾಗೃತಿ ಮೂಡಿಸಬೇಕು. ಕೆಲ ತಿಂಗಳ ಹಿಂದೆ ಪುನಾರಂಭವಾಗಿರುವ ವಹಿವಾಟುಗಳು ಮತ್ತೆ ಬಂದ್ ಆದರೆ ಕಷ್ಟವಾಗುತ್ತದೆ ಎಂಬುವುದು ಉದ್ಯಮಿಗಳ ಮಾತಾಗಿದೆ. ಆದರೆ, ನಗರದಲ್ಲಿ ಇಂದು ಹತ್ತು ಸಾವಿರ ಕೋವಿಡ್ ಕೇಸ್ ಪತ್ತೆಯಾಗಿದೆ. ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಡಾ.ಕೆ ಸುಧಾಕರ್

ರೆಮ್​ಡೆಸ್​​ವಿರ್​ ತಯಾರು ಮಾಡುವ 3 ಸಂಸ್ಥೆಗಳು ರಾಜ್ಯದಲ್ಲಿವೆ. ಇವರ ಜೊತೆ ಚರ್ಚೆ ನಡೆಸಿದ್ದೇನೆ, ರಾಜ್ಯಕ್ಕೆ ಎಷ್ಟು ಅವಶ್ಯಕತೆ ಇದೆ ಅಷ್ಟು ರಾಜ್ಯಕ್ಕೆ ಪೂರೈಸಿ ಬೇರೆ ರಾಜ್ಯಗಳಿಗೆ ನೀಡುವುದಕ್ಕೆ ಸೂಚಿಸಿದ್ದೇನೆ. ರಾಜ್ಯದ ಕಾಳಸಂತೆಯಲ್ಲಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದರೆ, ಅವರ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗುವುದು. ಜೊತೆಗೆ ಯಾವುದೇ ಕೊರತೆ ಇಲ್ಲದೆ ಮಹಾಮಾರಿ ವಿರುದ್ಧ ಹೋರಾಡಲು ಸರ್ಕಾರ ಶ್ರಮವಹಿಸುತ್ತಿದೆ ಎಂದರು.

ಸದ್ಯಕ್ಕೆ ಸರ್ಕಾರ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇದೆ. ಇದರಿಂದ ನಿತ್ಯ ಕೆಲಸಕ್ಕೆ ಹೋಗುವವರು ರೋಗ ಹರಡಲು ಸಾಧ್ಯವಿಲ್ಲ. ಜನರು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು ಸೇರಿದಂತೆ ಇನ್ನಿತರ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ಜನರು ಆರೋಗ್ಯದಿಂದ ಇರಬಹುದು ಎಂದರು.

ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಪಾಲನೆ ಇಲ್ಲ:ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್ ರಾಮನ್ ಮಾತನಾಡಿ, ಕೋವಿಡ್ ಎರಡನೇ ಅಲೆ ಹರಡಲು ನಿಯಮ ಪಾಲನೆಯಾಗದಿರುವುದೇ ಮುಖ್ಯ ಕಾರಣ. ಪ್ರಮುಖವಾಗಿ ರಾಜಕಾರಣಿಗಳು ಚುನಾವಣೆ ಪ್ರಚಾರದ ಸಂದರ್ಭ ಮಾಸ್ಕ್ ಹಾಕದೇ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವರಿಗೆ ಹೇಳಿದರು. ಇದಕ್ಕೆ ಮುಜುಗರದಿಂದ ಉತ್ತರಿಸಿದ ಸಚಿವ ಸುಧಾಕರ್, ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡಬೇಕು. ಎಲ್ಲೆಲ್ಲಿ ಪಾಲನೆ ಆಗಿಲ್ಲವೋ ಅದು ತಪ್ಪು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಬೆಂಗಳೂರು ನಗರದಲ್ಲಿ ಸದ್ಯಕ್ಕೆ 4 ವಿದ್ಯುತ್ ಚಿತಾಗಾರ ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮೀಸಲಿಡಲಾಗಿದೆ. ಇದನ್ನು 7ಕ್ಕೆ ಏರಿಸಲು ನಿರ್ಧಾರ ಮಾಡಲಾಗಿದೆ. ನಿತ್ಯ ಸರಾಸರಿ 7.5 ಸಾವಿರ ಕೇಸ್ ಬರುತ್ತಿದೆ, ಪರಿಸ್ಥಿತಿ ಕೈ ಮೀರಿದರೆ ಕಠಿಣ ಕ್ರಮ ಅಗತ್ಯ. ಲಾಕ್ ಡೌನ್ ಅನಿವಾರ್ಯ ಇಲ್ಲ, ಆದರೆ ಕೋವಿಡ್ ಬಗ್ಗೆ ಜಾಗೃತೆ ವಹಿಸಬೇಕು. ಪಾರ್ಟಿಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.

ಚರ್ಚೆಯಲ್ಲಿ ಜಯದೇವ ಮುಖ್ಯಸ್ಥ ಡಾ. ಮಂಜುನಾಥ್, ರೈಲ್ವೆ ಐಡಿಜಿಪಿ ಭಾಸ್ಕರ್ ರಾವ್, ಎಫ್​ಕೆಸಿಸಿಐ ಅಧ್ಯಕ್ಷ ಪೇರಿಕಲ್ ಸುಂದರ್ ಸೇರಿದಂತೆ ಉದ್ಯಮಿಗಳು ಪಾಲ್ಗೊಂಡಿದ್ದರು.

ABOUT THE AUTHOR

...view details