ಬೆಂಗಳೂರು:ಶಾಸಕ ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಸಮಾರಂಭದಲ್ಲಿ ಕೋವಿಡ್ 19 ಮಾರ್ಗಸೂಚಿ ಉಲ್ಲಂಘನೆಯಾಗಿದ್ದು, ಈ ಕುರಿತು ದೂರು ದಾಖಲಾಗಿದೆ. ಇನ್ಮುಂದೆ ಹೀಗಾಗದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲಿದ್ದೇವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪರಮೇಶ್ವರ ನಾಯ್ಕ್ ನನ್ನನ್ನು ಮದುವೆಗೆ ಆಹ್ವಾನಿಸಿದ್ದರು. ಇಲ್ಲ ಎನ್ನಲು ಸಾಧ್ಯವಾಗದೆ, ಮದುವೆಗೆ ಹೋಗಿದ್ದೆ. ನಾನು ಹೋಗಿದ್ದಾಗ ಜಾಸ್ತಿ ಜನ ಸೇರಿರಲಿಲ್ಲ. ನಂತರ ಹೆಚ್ಚಿನ ಜನರು ಸೇರಿದ್ದು, ಮಾಧ್ಯಮದ ಮೂಲಕ ಗೊತ್ತಾಯ್ತು. ಸಾಮಾಜಿಕ ಅಂತರ ಕಾಯ್ದುಳ್ಳದೇ, ನಿಗದಿತ ಜನಕ್ಕಿಂತ ಹೆಚ್ಚಿನ ಜನರನ್ನು ಸೇರಿಸಿ ಮದುವೆ ಮಾಡಿದ್ದಾರೆ ಎಂದರು.
ಆರೋಗ್ಯ ಸಚಿವ ಬಿ. ಶ್ರೀರಾಮುಲು ಬೆಂಗಳೂರಿನಲ್ಲಿ ಆತಂಕ
ಬೆಂಗಳೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು, ಆತಂಕ ತಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ನಾಳೆ ಸಭೆ ನಡೆಸುತ್ತೇನೆ. ಸಾವಿನ ಸಂಖ್ಯೆ ನಿಯಂತ್ರಣ ಸಂಬಂಧ ಚರ್ಚೆ ನಡೆಸಲಾಗುತ್ತಿದ್ದು, ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳೂ ಸಾವಿಗೆ ಕಾರಣ ಆಗುತ್ತಿವೆ. ಹಾಗಾಗಿ ಇವುಗಳ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಕಳಪೆ ಪಿಪಿಇ ಕಿಟ್ ಪೂರೈಸಿದ ಕಂಪನಿ ಕಪ್ಪುಪಟ್ಟಿಗೆ
ಕಳಪೆ ಪಿಪಿಇ ಕಿಟ್ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿರುವುದನ್ನು ಗಮನಿಸಿದ್ದೇನೆ. ಕಳಪೆ ಕಿಟ್ ಪೂರೈಕೆ ಆಗಿದ್ದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಿಟ್ಗಳನ್ನು ಪೂರೈಸುವ ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ ಎಂದರು. ಕಳಪೆ ಪಿಪಿಇ ಕಿಟ್ ಪೂರೈಸಿದ್ದರೆ ಅಂತಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗಿದ್ದು, ಜೊತೆಗೆ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಆಗಸ್ಟ್ನಲ್ಲಿ ಮುನ್ನೆಚ್ಚರಿಕೆ
ಆಗಸ್ಟ್ ತಿಂಗಳಲ್ಲಿ ಕೊರೊನಾ ಪ್ರಕಣಗಳು ಹೆಚ್ಚಾಗಲಿದ್ದು, ಈ ಬಗ್ಗೆ ತಜ್ಞರು ವರದಿ ಕೊಟ್ಟಿದ್ದಾರೆ. ಹಾಗಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದ್ದು, ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡಲು ಒಪ್ಪಿಕೊಂಡಿವೆ ಎಂದರು. ಇದಲ್ಲದೆ ಕೊರೊನಾ ಎದುರಿಸಲು ಫೀಲ್ಡ್ ಹಾಸ್ಪಿಟಲ್ಗಳಿಗೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಫೀಲ್ಡ್ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಜಿಲ್ಲೆಗೊಂದು ಫೀಲ್ಡ್ ಆಸ್ಪತ್ರೆ ಮಾಡಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಳಾವಕಾಶ ತುಂಬಿದ ಬಳಿಕ ಫೀಲ್ಡ್ ಆಸ್ಪತ್ರೆಗಳನ್ನು ಬಳಕೆ ಮಾಡಲಿದ್ದೇವೆ ಎಂದರು.
ಗುತ್ತಿಗೆ ವೈದ್ಯರ ಜೊತೆ ಮಾತುಕತೆ:
ಗುತ್ತಿಗೆ ವೈದ್ಯರು ಸಾಮೂಹಿಕ ರಾಜೀನಾಮೆ, ಪ್ರತಿಭಟನೆಯಂತಹ ಕ್ರಮಕ್ಕೆ ಮುಂದಾಗಿರುವುದು ಗಮನಕ್ಕೆ ಬಂದಿದ್ದು, ಈ ಸಂಬಂಧ ಗುತ್ತಿಗೆ ವೈದ್ಯರ ಬಳಿ ಮಾತನಾಡಿದ್ದೇವೆ, ಸಂಘದ ಅಧ್ಯಕ್ಷರನ್ನು ಕರೆಸಿ ಮಾತುಕತೆ ನಡೆಸಲಾಗಿದೆ ಎಂದರು. ಅವರ ಬೇಡಿಕೆ ಸಂಬಂಧ ತಜ್ಞರು ವರದಿ ಕೊಡಬೇಕಿದೆ, ಮೂರು ತಿಂಗಳಲ್ಲಿ ವರದಿ ಬರಲಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ವೇತನ ಬಗ್ಗೆ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.