ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರ್ಲಕ್ಷ್ಯ ತೋರಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ಕಳೆದೆರಡು ವರ್ಷಗಳಿಂದ ಹೊರ ಹಾಗೂ ಒಳ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡುತ್ತಲೇ ಬಂದಿರುವ ಸರ್ಕಾರಗಳು, ನೌಕರರಿಂದ ಕೆಲಸ ಮಾತ್ರ ಮಾಡಿಸಿಕೊಳ್ಳುತ್ತಿವೆ. ಆದರೆ ಅವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿರುವ ಗುತ್ತಿಗೆ ವೈದ್ಯಕೀಯ ಸಿಬ್ಬಂದಿ ಎಲ್ಲವೂ ಅಂತಿಮ ಹಂತಕ್ಕೆ ಬಂದಿದೆ, ತಕ್ಷಣ ಬೇಡಿಕೆ ಈಡೇರಿಸಲಾಗುವುದು ಎಂದು ಎರಡು ತಿಂಗಳ ಹಿಂದೆ ತಿಳಿಸಿದ್ದ ಇಲಾಖೆ, ಲಾಕ್ಡೌನ್ ಆದ ಕಾರಣ, ಕೊರೊನಾ ಸಮಸ್ಯೆ ಇತ್ಯರ್ಥವಾಗುತ್ತಿದ್ದಂತೆಯೇ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು.
ಏಪ್ರಿಲ್ 30 ರಂದು ನಡೆದ ಸಂಪುಟ ಸಭೆಯಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ಇದೂ ಸಹ ಹುಸಿಯಾಗಿರುವುದರಿಂದ ಇದೀಗ ಅನಿವಾರ್ಯವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತಾ, ಸ್ಥಳದಲ್ಲಿಯೇ ಕಪ್ಪು ಪಟ್ಟಿ ಧರಿಸಿ ಸೇವೆಗೆ ಚ್ಯುತಿ ಬರದಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ಬಿಡುವಿನ ವೇಳೆಯಲ್ಲಿ ಪ್ರತಿಭಟನಾ ಫಲಕಗಳ ಪ್ರದರ್ಶನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಇದರ ನಂತರವೂ ಇಲಾಖೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿವಾರ್ಯವಾಗಿ ಎರಡನೇ ಹಂತದಲ್ಲಿ ಮುಷ್ಕರವನ್ನು ಅನಿರ್ಧಿಷ್ಟಾವಧಿ ಕಾಲಾವಧಿಗೆ ಮುಂದುವರೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.