ಬೆಂಗಳೂರು: ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳನ್ನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಜಾರಿಗೊಳಿಸಿ, ಸೆರೆವಾಸಿಗಳ ಸ್ವಾಸ್ಥ್ಯ ಸುಧಾರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ನಿರ್ಧರಿಸಿದೆ.
ಇಲಾಖೆಯ ಆಯುಕ್ತ ಡಿ.ರಂದೀಪ್ ನೇತೃತ್ವದ ತಂಡ ಇಂದು ಕೇಂದ್ರ ಕಾರಾಗೃಹಕ್ಕೆ ತೆರಳಿ ಅರೋಗ್ಯ ಸೌಲಭ್ಯಗಳ ಪರಿಶೀಲನೆ ನಡೆಸಿತು. ಈಗಿನ ಆರೋಗ್ಯ ವ್ಯವಸ್ಥೆಯನ್ನು ಆಧುನಿಕವಾಗಿ ಮೇಲ್ದರ್ಜೆಗೇರಿಸಲು ಹಾಗೂ ತುರ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಟೆಲಿ ಮೆಡಿಸನ್ ವ್ಯವಸ್ಥೆ ಜಾರಿಮಾಡುವಂತೆ ಸೂಚಿಸಿದ್ದಾರೆ.
ಸೆರೆವಾಸಿಗಳಿಗೆ ಕಿದ್ವಾಯಿ, ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿರುವ ಆಧುನಿಕ ಸೌಲಭ್ಯ ಕಲ್ಪಿಸುವ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಾನಸಿಕ ಆರೋಗ್ಯ ರಕ್ಷಣೆ, ತಂಬಾಕು ನಿಯಂತ್ರಣ ಯೋಜನೆ ಜಾರಿ, ಆಯುಷ್ಯ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಕರ್ನಾಟಕ ಕಾರ್ಡ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಜನ ಸಾಮಾನ್ಯರು ಹೊರಗಡೆ ಪಡೆಯುವ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಕಾರಾಗೃಹದಲ್ಲಿರುವವರಿಗೆ ದೊರಕಿಸಿಕೊಡುವ ಜೊತೆಗೆ ಔಷಧಗಳ ದಾಸ್ತಾನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು. ಕಾರಾಗೃಹದಲ್ಲಿ ಐದು ಸಾವಿರ ಕೈದಿಗಳಿದ್ದು, ಭೇಟಿ ನೀಡಿದ ಸಂದರ್ಭದಲ್ಲಿ ಶುಚಿತ್ವಕ್ಕೆ ಕೊರತೆ ಇರಲಿಲ್ಲ. ಸೆರೆಮನೆಯಲ್ಲಿ ಬೇಕರಿ. ಮಗ್ಗ, ಸಂಗೀತ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.
ಸೆರೆ ಮನೆಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡಲು ಅಗತ್ಯವಿರುವ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ರಂದೀಪ್ ಅವರು ಸೆರೆಮನೆಯ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಕಾರಾಗೃಹಕ್ಕೆ ಪ್ರತಿದಿನ 60-80 ಜನ ಕೈದಿಗಳು ಬರುತ್ತಾರೆ, ಬಿಡುಗಡೆಯಾಗುತ್ತಾರೆ. ಇವರ ಆರೋಗ್ಯ ತಪಾಸಣೆಗೆ ಆರೋಗ್ಯ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಮೂರು ಜನ ಮನಶಾಸ್ತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಮದ್ಯಪಾನ, ಧೂಮಪಾನ ವ್ಯವಸನಿಗಳಿಗೆ ಸೂಕ್ತ ಚಿಕತ್ಸೆಗೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಉಪ ನಿರ್ದೇಶಕ (ಮಾನಸಿಕ ಆರೋಗ್ಯ) ಡಾ.ಪಿ.ರಜನಿ ಮಾತನಾಡಿ, ಏಕಾಏಕಿ ಜೈಲಿಗೆ ಬಂದರೆ ಕೆಲವರಿಗೆ ಆಘಾತ ಮಾನಸಿಕ ಖಿನ್ನತೆಯಾಗುತ್ತದೆ. ಇಂತಹವರಿಗೆ ವಿಶೇಷವಾಗಿ ಮಾನಸಿಕ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆಯೂ ಸಹ ಒಬ್ಬ ವೈದ್ಯರನ್ನು ಕಡ್ಡಾಯವಾಗಿ ಕಾರಾಗೃಹದಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಗರ್ಭಿಣಿಯರ ಪ್ರಸವಕ್ಕೆ ತೊಂದರೆಯಾಗದಂತೆ ಮತ್ತು ಆರು ವರ್ಷದವರೆಗೆ ಮಕ್ಕಳನ್ನು ನೋಡಿಕೊಳ್ಳಲು ಸಹ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸರ್ಕಾರದ ಆದೇಶ ಉಲ್ಲಂಘಿಸಿ ಹು-ಧಾ ಮಹಾನಗರ ಪಾಲಿಕೆಯಲ್ಲಿ ಟಿಪ್ಪು ಜಯಂತಿ ಆಚರಣೆ