ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಿಗೆ ಸಾಥ್ ನೀಡುತ್ತಿದ್ದ ಆರೋಪಿ ಕಾನ್ಸ್‌ಟೇಬಲ್ ಪ್ರಭಾಕರ್, ಕೇವಲ 2 ರಿಂದ 3 ಸಾವಿರ ರೂ.ಗೆ ಇಲಾಖೆಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ಸಿಡಿಆರ್ (ಕಾಲ್ ಡಿಟೇಲ್ ರೆಕಾರ್ಡ್) ಮೂಲಕ ಪತ್ತೆ ಹಚ್ಚಿದ್ದಾರೆ ಎನ್ನಲಾಗ್ತಿದೆ.
ಕಾನ್ಸ್‌ಟೇಬಲ್ ಪ್ರಭಾಕರ್, ಆರೋಪಿಗಳಿಗೆ ಎಲ್ಲೆಲ್ಲಿ ಹೋಗಿ ಡ್ರಗ್ಸ್ ಸಂಗ್ರಹಿಸಬೇಕು, ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಜರುಗಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದನಂತೆ. ಪ್ರಭಾಕರ್ ಟೆಕ್ನಿಕಲ್ ವಿಭಾಗದಲ್ಲಿ ನಿಪುಣನಾಗಿದ್ದು, ಸದಾಶಿವನಗರ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಈತ, ನಿಮ್ಮನ್ನು ಇಂಥವರು ಹುಡುಕಾಟ ನಡೆಸುತ್ತಿದ್ದಾರೆ, ನೀವು ಈ ರೀತಿಯಾಗಿ ಕಾರ್ಯ ನಿರ್ವಹಿಸಿದರೆ ನೀವು ಸೇಫ್ ಎಂಬ ಬಗೆಗಿನ ಪಿನ್-ಟು-ಪಿನ್ ಮಾಹಿತಿಯ್ನ ನೀಡುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗೆ ಇಲಾಖೆ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡಿದ್ದ. ಅದಲ್ಲದೆ, ಸಿಡಿಆರ್ ಕಾಪಿಗಳನ್ನು ಸಹ ಕೇವಲ 2 ಸಾವಿರ ರೂಪಾಯಿ ಪಡೆದು ಆರೋಪಿಗಳಿಗೆ ನೀಡುತ್ತಿದ್ದ ಎಂದು ಹೇಳಲಾಗ್ತಿದೆ.
ಕಾನ್ಸ್‌ಟೇಬಲ್ ಪ್ರಭಾಕರ್ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸಿಡಿಆರ್ ತೆಗೆಯಲು ಇರುವ ಪ್ರೊಸಿಜರ್ ಏನು..?
ಸಿಡಿಆರ್ ಅಂದ್ರೆ ಕಾಲ್ ಡಿಟೇಲ್ ರೆಕಾರ್ಡ್ ಎಂದರ್ಥ. ಇದು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದಾಗ, ಆ ಆರೋಪಿಗಳ ಟವರ್ ಲೊಕೇಷನ್ ಬಗ್ಗೆ ಹಾಗೂ ಅವರ ಮೊಬೈಲ್ ಕರೆಗಳ ಮಾಹಿತಿಗಾಗಿ ಪಡೆಯಲಾಗುತ್ತೆ. ಸಿಡಿಆರ್ ಪಡೆದು ತನಿಖೆ ನಡೆಸುವ ಅವಶ್ಯಕತೆ ಬಂದರೆ ಆ ಠಾಣೆಯ ಇನ್ಸ್ಪೆಕ್ಟರ್ ಡಿಸಿಪಿ ಬಳಿ ಅನುಮತಿ ಕೇಳಬೇಕು. ನಂತರ ಅನುಮತಿಗಾಗಿ ಪುನಃ ಡಿಸಿಪಿ, ಪತ್ರದ ಮುಖೇನ ಡಿಜಿ ಕಚೇರಿಗೆ ರವಾನಿಸುತ್ತಾರೆ. ಪತ್ರದಲ್ಲಿ ಯಾವ ಪ್ರಕರಣ ಹಾಗೂ ಯಾವ ಆರೋಪಿಯ ಮಾಹಿತಿ ಬೇಕು ಎಂಬ ಎಲ್ಲ ಅಂಶವನ್ನೂ ಸಹ ಉಲ್ಲೇಖಿಸಿರಬೇಕು. ತದನಂತರ ಡಿಜಿ ಕಚೇರಿಯಿಂದ ಅಪ್ರೂವಲ್ ಸಿಕ್ಕರೆ ಅದನ್ನ ಡಿಸಿಪಿಗೆ ತಿಳಿಸಲಾಗುತ್ತೆ. ಡಿಸಿಪಿ ಈ ಬಗ್ಗೆ ತನಿಖಾಧಿಕಾರಿಗೆ ಮಾತ್ರ ತಿಳಿಸುತ್ತಾರೆ ಹಾಗೂ ಈ ತನಿಖಾಧಿಕಾರಿ ಮಾತ್ರ ಸಿಡಿಆರ್ ಮೂಲಕ ಮಾಹಿತಿ ಹೊರ ತೆಗೆಯಲು ಅವಕಾಶ ಇರುತ್ತದೆ.
ಒಂದು ಪತ್ರದ ಮನವಿಗೆ 10 ದಿನವಷ್ಟೇ ಕಾಲಾವಕಾಶವಿರುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದಾದಲ್ಲಿ ಪುನಃ ಮತ್ತೊಂದು ಪತ್ರವನ್ನು ಕಳುಹಿಸಿಕೊಡಬೇಕಾಗುತ್ತದೆ. ಈ ಅವಕಾಶಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದ ಪ್ರಭಾಕರ್, ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಇಲಾಖೆಯ ಮಾಹಿತಿಗಳನ್ನ ಸೋರಿಕೆ ಮಾಡುತ್ತಿದ್ದ ಎಂಬುದು ಬಯಲಾಗಿದೆ.