ಬೆಂಗಳೂರು :ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ನಿಂತಿದೆ. ಇದಕ್ಕಾಗಿಯೇ ಜೆಡಿಎಸ್ ಎನ್‌ಡಿಎ ಸೇರಲಿದೆ ಎಂಬ ಕಲ್ಪಿತ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ. ಇದೆಲ್ಲವೂ ಅಪ್ಪಟ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನೆನಪಿರಲಿ, ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧವ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ ಎಂದು ಹೇಳಿದ್ದಾರೆ.
ಜೆಡಿಎಸ್ ಜೊತೆಗೆ ಮಿತ್ರತ್ವದ ನಾಟಕವಾಡಿ, ಕಡೆಗೆ ಪಕ್ಷವನ್ನೇ ಒಡೆಯಲು ಯತ್ನಿಸಿದವರು ಅನೇಕರು. ಈಗ ಬಿಜೆಪಿ ಸರದಿ. ಅಷ್ಟಕ್ಕೂ ಮೈತ್ರಿಗೆ ಜೆಡಿಎಸ್‌ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು? ಜೆಡಿಎಸ್‌ನೊಂದಿಗೆ ಮೈತ್ರಿ ಇಲ್ಲವೆಂದಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಮೈತ್ರಿ ಪ್ರಸ್ತಾಪ ಇಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.