ಬೆಂಗಳೂರು :ಇಂದು 120 ವರ್ಷಗಳ ಹಿಂದೆ ಕಾಲರಾ, ಪ್ಲೇಗ್ಗಳಿಂದ ಭಾರತೀಯರನ್ನು ಕಾಪಾಡಿದ ವ್ಲಾಡಿಮೀರ್ ಹಾಫ್ಕಿನ್ ಜನ್ಮದಿನ. ಈಗ ಜಗತ್ತು ಕೊರೊನಾ ವೈರಸ್ ದಾಳಿಗೆ ತುತ್ತಾಗಿರುವಂತೆ, ಈ ಹಿಂದೆಯೂ ಕಾಲರಾ, ಪ್ಲೇಗ್ ದಾಳಿಗೆ ತುತ್ತಾಗಿತ್ತು. ಇಂತಹ ಸಂದರ್ಭದಲ್ಲಿ ಜೀವ ಭಯ ತೊರೆದು ದುಡಿದ ವೈದ್ಯ ವಿಜ್ಞಾನಿಗಳಲ್ಲಿ ರಷ್ಯಾದ ವ್ಲಾಡಿಮೀರ್ ಹಾಫ್ಕಿನ್ ಪ್ರಮುಖರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ಯಾರಿಸ್-ಜಿನೇವಾಗಳಲ್ಲಿಯೂ ಕಾರ್ಯ ನಿರ್ವಹಿಸಿದ ಅವರು ಯೂರೋಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಕಂಡು ಹಿಡಿಯಲು ಆಸಕ್ತಿ ವಹಿಸಿದ್ದರು. 1892ರಲ್ಲಿ ತಾವು ಅನ್ವೇಷಿಸಿದ ಕಾಲರಾ ಲಸಿಕೆ ಪರೀಕ್ಷಿಸಲಿಕ್ಕಾಗಿ ಮೊದಲ ಬಾರಿ ತಮ್ಮ ದೇಹಕ್ಕೆ ಚುಚ್ಚಿಕೊಂಡಿದ್ದ ಮಹಾನುಭಾವರು ಇವರು.
ಅದೇ ಸಂದರ್ಭದಲ್ಲಿ ಭಾರತದಲ್ಲಿ ಕಾಲರಾ ಮರಣ ಮೃದಂಗ ಬಾರಿಸುತ್ತಿತ್ತು. ಬ್ರಿಟಿಷ್ ವೈಸ್ ರಾಯ್ ಫ್ರೆಡೆರಿಕ್ ಹ್ಯಾಮಿಲ್ಟನ್ ಮೂಲಕ ಭಾರತಕ್ಕೆ ಆಗಮಿಸಿದ ಅವರು ಸುಮಾರು 45,000 ಜನರಿಗೆ ಕಾಲರಾ ಚುಚ್ಚು ಮದ್ದು ನೀಡಿ, ಶೇ.70ರಷ್ಟು ಸಾವು-ನೋವು ತಪ್ಪಿಸಿದ್ದರು.
ಮಹಾರಾಷ್ಟ್ರದ ಬೈಕುಲಾದಲ್ಲಿ ಪ್ರಯೋಗಾಲಯ ತೆರೆದು ಹಲವು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದರು. 1902-03ರ ಸುಮಾರಿನಲ್ಲಿ ಪ್ಲೇಗ್ ಮಾರಿ ಭಾರತವನ್ನು ಕಾಡಿದಾಗ ಸುಮಾರು 5,00,000 ಮಂದಿಗೆ ಇವರು ಕಂಡು ಹಿಡಿದ ಲಸಿಕೆ ಜೀವದಾನ ಮಾಡಿತು.