ಬೆಂಗಳೂರು : ತಿರುಪತಿ ವಸತಿ ಸಮುಚ್ಚಯ ಯೋಜನೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ತಿರುಪತಿ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ನಿಲ್ಲಿಸಿ: ಹೆಚ್ಡಿಕೆ ಆಗ್ರಹ - ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ
ಕೇವಲ 26 ಕೋಟಿ ರೂ. ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ ವೆಚ್ಚ, ಬಿಜೆಪಿ ಸರ್ಕಾರದಲ್ಲಿ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಯೋಜನೆಯ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ನಾನು ಸಿಎಂ ಆಗಿದ್ದಾಗ ಕೇವಲ 26 ಕೋಟಿ ರೂ. ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, ಬಿಜೆಪಿ ಸರ್ಕಾರದಲ್ಲಿ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೆ ಏರಿಕೆಯಾಗಿದೆ. ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ. ಆದರೆ ಕೋವಿಡ್ ಕಾಲದ ಈ ಲೂಟಿಗಲ್ಲ. ಸರ್ಕಾರ ಕೂಡಲೇ ಈ ಯೋಜನೆಯನ್ನು ನಿಲ್ಲಿಸಲಿ" ಎಂದು ಆಗ್ರಹಿಸಿದ್ದಾರೆ.
ಈ ಯೋಜನೆಗೆ ರಾಜ್ಯ ಸರ್ಕಾರ ಟಿಟಿಡಿಗೆ 200 ಕೋಟಿ ರೂ. ನೀಡುತ್ತಿದೆ. ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5 (10 ಕೋಟಿ ) ನ್ನು ನೀಡಲಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ. ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ. ಕೋವಿಡ್ ಸಂಕಷ್ಟ ಕಾಲದಲ್ಲಿ ಈ ಯೋಜನೆಯ ಅಗತ್ಯವಾದರೂ ಏನು ಎಂದು ಕಿಡಿ ಕಾರಿದ್ದಾರೆ.