ಬೆಂಗಳೂರು: ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿ: ಎಚ್ಡಿಕೆ ಆಗ್ರಹ - FIR against Rakesh tikait
ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ರೈತ ನಾಯಕ ರಾಕೇಶ್ ಟಿಕಾಯತ್ ಮೇಲಿದೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ. ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು? ಎಂದು ಪ್ರಶ್ನಿಸಿದ್ದಾರೆ.
ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ. ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.