ಬೆಂಗಳೂರು :ವಿವಿಧ ಇಲಾಖೆಗಳ ಸಿಬ್ಬಂದಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ ಎಂದುಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ ಕೈದಿಗಳಿಂದ ಕೊರೊನಾ ಸೋಂಕು ಭೀತಿಗೊಳಗಾಗಿದ್ದ ನಗರಸಭೆ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ 68 ಮಂದಿಯ ವೈದ್ಯಕೀಯ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ ಎಂದಿದ್ದಾರೆ.
ಇನ್ನೊಂದು ಟ್ವೀಟ್ ಮಾಡಿರುವ ಅವರು, ಇನ್ನೂ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ರಾಮನಗರ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡೋಣ. ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಿ. ನೆಗೆಟಿವ್ ವರದಿ ಬಂದಿದೆ ಎಂದು ಮೈಮರೆಯುವ ಸಮಯ ಇದಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಕೆಂಪು ವಲಯವಾಗಿ ಪರಿವರ್ತಿತವಾಗಿದ್ದ ರಾಮನಗರ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾರ್ಪಡಿಸಿ, ಹಸಿರು ವಲಯದ ಜಿಲ್ಲೆಗಳಿಗೆ ನೀಡಿರುವ ವಿನಾಯಿತಿಯನ್ನು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.