ರಾಮನಗರ : ಈ ಹಿಂದಿನ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮಂಜೂರು ಮಾಡಿದ್ದ ಹಲವು ಯೋಜನೆಗಳನ್ನು ಜಿಲ್ಲೆಯಿಂದ ಸ್ಥಳಾಂತರಿಸಲು ಪ್ರಸ್ತುತ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು 2018ರ ಅವಧಿಯಲ್ಲಿ ಮಂಜೂರು ಮಾಡಿದ್ದೆ. ಆದರೆ, ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ರಾಮನಗರವೂ ಸೇರಿ ಹಲವಾರು ಜಿಲ್ಲೆಗಳಿಗೆ ಮಂಜೂರಾಗಿದ್ದ ಯೋಜನೆಗಳನ್ನು ತಡೆ ಹಿಡಿಯುವ ಮೂಲಕ ಜನರಿಗೆ ಅನ್ಯಾಯ ಮಾಡಬೇಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.