ಬೆಂಗಳೂರು: ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ 'ನೀಟಾಗಿ' ತಪ್ಪಿಸುವ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಮಾನ ಶಿಕ್ಷಣ, ಸಮಾನ ಅವಕಾಶಗಳು ಎಂಬ ಸಂವಿಧಾನದ ಆಶಯವನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿದೆ. ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ. ಪರಿಣಾಮ ಎಂಜಿನಿಯರಿಂಗ್ ಕೌನ್ಸೆಲಿಂಗ್ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಹಿಡಿದ ಕನ್ನಡಿ ಇದು ಎಂದು ಟೀಕಿಸಿದ್ದಾರೆ.
ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ? ಇದೇ ಸತ್ಯ ಎನ್ನುವಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್ ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ ಈ ವಿಳಂಬ ದ್ರೋಹದ ಹಿಂದೆ ಇದೆಯಾ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.