ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಜೆಪಿ ನಗರದಲ್ಲಿ ಇಂದು ಮೊಮ್ಮಗನ ನಾಮಕರಣ ಸಮಾರೋಪದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳಬೇಕಾ?. ನಾವು 32 ಮಂದಿ ಶಾಸಕರು ಇದ್ದೇವೆ. ಕಾಂಗ್ರೆಸ್ ನವರು 25 ಜನ. ಯಾರ ಬಳಿ ಹೆಚ್ಚು ಮತಗಳು ಇವೆ ಹೇಳಿ, ಇವರ ದಬ್ಬಾಳಿಕೆಗೆಲ್ಲಾ ನಾವು ಬಗ್ಗಲು ಆಗುತ್ತಾ? ಎಂದು ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಅಭ್ಯರ್ಥಿ ಚುನಾವಣಾ ಕಣದಿಂದ ಯಾಕೆ ಹಿಂದೆ ಸರಿಯುತ್ತಾರೆ. ನಾವೇನು ಸಂಧಾನ ಮಾಡುತ್ತಿಲ್ಲ. ನನ್ನ ಬಳಿ ಯಾರು ಸಂಧಾನಕ್ಕೆ ಬಂದಿದ್ದಾರೆ ಅನ್ನೋದನ್ನು ಅವರು ಹೇಳಲಿ, ನಾವು ಮೊದಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇವರು ನಮ್ಮ ಜೊತೆ ಸಮಾಲೋಚನೆ ಮಾಡಿ ಅಭ್ಯರ್ಥಿ ಹಾಕಿದ್ದಾರಾ?. ಬೆಂಬಲ ಕೊಡಿ ಅಂತಾ ನಮ್ಮ ಪಕ್ಷದ ಅಧ್ಯಕ್ಷರನ್ನು ಕೇಳಬಹುದಾಗಿತ್ತಲ್ವಾ, ಅವರು ಸಿ.ಎಂ. ಇಬ್ರಾಹಿಂ ಅವರಿಗೆ ಹಳೆಯ ಸ್ನೇಹಿತರು ಅಲ್ಲವೇ ?. ಆದರೆ, ಈಗ ವಾಪಸ್ ತೆಗೆದುಕೊಳ್ಳಲಿ ಅಂತಾ ಹೇಳುವುದು ಬಂಡತನ. ನಾವೇನು ಇವರ ಗುಲಾಮರ?. ಅವರು ಕಾಂಗ್ರೆಸ್ಗೆ ಹೋದ ಬಳಿಕ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಎಷ್ಟು ಬಾರಿ ಬೆಂಬಲ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಕಾಟಾಚಾರದ ಅಧ್ಯಕ್ಷರನ್ನು ಮಾಡಿದ್ದಾರೆಂದು ಕುಹಕವಾಡಿದ್ದಾರೆ. ಇದು ಅವರ ಸಣ್ಣತನ. ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ನಾವು ಇಬ್ರಾಹಿಂ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ. ಇವರು ಎಷ್ಟು ಜನ ಅಲ್ಪಸಂಖ್ಯಾತರ ಕುತ್ತಿಗೆ ಕೊಯ್ದಿಲ್ಲ ಹೇಳಿ ಎಂದು ಹೆಚ್ಡಿಕೆ ಕಿಡಿಕಾರಿದರು.