ಬೆಂಗಳೂರು: ಕಾಂಗ್ರೆಸ್ನವರು ಏಕೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೋ ಗೊತ್ತಿಲ್ಲ. ಬಹುಶಃ ಪ್ರಚಾರಕ್ಕಾಗಿರಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಸಂಬಂಧ ಇದುವರೆಗೂ ಕಾಂಗ್ರೆಸ್ನವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಚರ್ಚೆ ಮಾಡಿದರೆ ನೋಡೋಣ. ವಿಪತ್ತು ಇರೋ ಈ ಸಮಯದಲ್ಲಿ ಗೊಂದಲ ಮೂಡಿಸೋ ನಡೆಗಳು ಬೇಕಾ?. ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಕಾಯ್ದೆ ವಿರುದ್ಧ ಜೆಡಿಎಸ್ ಈಗಾಗಲೇ ಪ್ರತಿಭಟನೆ ಶುರು ಮಾಡಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆತುರವಾಗಿ ಈ ಕಾಯ್ದೆ ಸುಗ್ರೀವಾಜ್ಞೆ ತರುವ ಅವಶ್ಯಕತೆ ಏನಿತ್ತು?. ರೈತರು, ಶಾಸಕರು ಜೊತೆ ಚರ್ಚೆ ಮಾಡಬೇಕಿತ್ತು. ಸರ್ಕಾರ ಈ ಕಾಯ್ದೆಯಿಂದ ಹಿಂದೆ ಸರಿಬೇಕು ಎಂದು ಆಗ್ರಹಿಸಿದರು.
ಸಿಎಂ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪದ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ, ಯಾರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿಲ್ಲ ಹೇಳಿ?. ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥ ಇಲ್ಲ. ಎಲ್ಲ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪ ಇದೆ. ನಾನು ಹೋರಾಟ ಮಾಡಿ ಸಾಕಾಗಿದೆ. ಅದರಿಂದ ಸಮಯ ವ್ಯರ್ಥ ಅಷ್ಟೇ. ನಾನು ಶಸ್ತ್ರತ್ಯಾಗ ಮಾಡಿಲ್ಲ. ಭ್ರಷ್ಟಾಚಾರ ವಿಷಯಗಳು ತಾರ್ಕಿಕ ಅಂತ್ಯ ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತೆ ಎಂಬುದು ನನಗೆ ಗೊತ್ತು ಎಂದು ತಿಳಿಸಿದರು.