ಬೆಂಗಳೂರು:ಜುಲೈ 1ರಿಂದ 17ರವರೆಗೆ 17 ದಿನಗಳ ಕಾಲ ಜನತಾ ಮಿತ್ರ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹೆಚ್.ಡಿ. ಕುಮಾರಸ್ವಾಮಿ ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಬಸವನಗುಡಿ ವಿಧಾನಸಭೆ ಕ್ಷೇತ್ರಗಳ ಮುಖಂಡರ ಜೊತೆ ನಡೆಸಿದರು.
ಒಟ್ಟಾಗಿ ಕೆಲಸ ಮಾಡಲು ಸೂಚನೆ: ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಮೂರು ಕ್ಷೇತ್ರಗಳ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ನಡೆಸಿದ ಹೆಚ್ಡಿಕೆ, ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್‌ಇಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು. ನನ್ನನ್ನು ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ.
ಈ ವಾಹನಗಳು ಬರುವ ಮುನ್ನ ಆಯಾ ಕ್ಷೇತ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆ-ಮನೆಗೂ ಮುಟ್ಟಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ ಎನ್ನಲಾಗ್ತಿದೆ. ಜನತಾ ಮಿತ್ರ ವಾಹನ ಬಂದಾಗ ಏನೆಲ್ಲಾ ಮಾಡಬೇಕು, ಜನರಿಗೆ ಯಾವೆಲ್ಲ ಸಂದೇಶ ನೀಡಬೇಕು? ಎಂಬ ಬಗ್ಗೆಯೂ ಸೂಚನೆಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮದ ಮುಖ್ಯಾಂಶಗಳನ್ನು ವಿವರಿಸಿದರು.
ಜನತಾ ಮಿತ್ರ ಉದ್ದೇಶ: 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ನಗರದ ಜನತೆಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಪ್ರಾದೇಶಿಕ ಆಸ್ಮಿತೆಯ ಪಕ್ಷವಾದ ಜಾತ್ಯತೀತ ಜನತಾದಳವು ಈ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರ್ಕಾರ ಹೇಗೆ ಕೆಲಸ ಮಾಡಬೇಕು? ಜನರ ನಿರೀಕ್ಷೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಹೆಚ್ಡಿಕೆ ತಿಳಿಸಿದರು.
ಜನರಲ್ಲಿ ವಿಶ್ವಾಸ ಮೂಡಿಸಬೇಕು: ಎಲ್ಲರಿಗೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯ, ಕುಡಿಯುವ ನೀರು, ಜಲಮೂಲಗಳ ಸಂರಕ್ಷಣೆ, ಕೆರೆ ಕಟ್ಟೆಗಳ ರಕ್ಷಣೆ, ತ್ಯಾಜ್ಯ ನೀರಿನ ಸಮರ್ಪಕ ನಿರ್ವಹಣೆ, ಸುಗಮ ಸಂಚಾರ, ಸ್ವಚ್ಛತೆ, ನೈರ್ಮಲ್ಯ, ಸಮರ್ಪಕ ಕಸ ವಿಲೇವಾರಿ, ಆರ್ಥಿಕವಾಗಿ ದುರ್ಬಲರಾಗಿರುವವರ ಸಬಲೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲು ನಿರ್ಧರಿಸಿದ್ದು, ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.