ಬೆಂಗಳೂರು: ಆಪರೇಷನ್ ಕಮಲದ ಸಂದರ್ಭದಲ್ಲಿ ಮುಂಬೈ ರೆಸಾರ್ಟ್‌ನಲ್ಲಿದ್ದ ಬಿಜೆಪಿ ಪರ ಶಾಸಕರಿಗೆ ಸ್ಯಾಂಟ್ರೋ ರವಿಯು 12 ಹುಡುಗಿಯರನ್ನು ಪೂರೈಸಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಂಬೈ ರೆಸಾರ್ಟ್‌ಗೆ ಹುಡುಗಿಯರನ್ನು ಪೂರೈಸಲಾಗಿತ್ತು ಎಂಬ ಕುಮಾರಸ್ವಾಮಿ ಅವರ ಆರೋಪವು ಗಂಭೀರ ಸ್ವರೂಪದ್ದು. ಆದರೆ ಕೇವಲ ಹೇಳಿಕೆ ನೀಡಿ ಸುಮ್ಮನಾಗುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕುಮಾರಸ್ವಾಮಿ ಶೀಘ್ರವೇ ಬಹಿರಂಗ ಪಡಿಸಲಿ. ಹಿಟ್ ಆ್ಯಂಡ್ ರನ್ ಮಾಡುವ ಬದಲು ಜವಾಬ್ದಾರಿಯುತ ನಾಯಕರಂತೆ ರಾಜ್ಯದ ಜನತೆಯ ಮುಂದೆ ಸಾಕ್ಷಿಗಳನ್ನು ತೆರೆದಿಡಲಿ ಎಂದು ಹೇಳಿದರು.
ರಾಜ್ಯ ಬಿಜೆಪಿಯು ಕೇಂದ್ರ ಬಿಜೆಪಿಯ ಸಹಕಾರದೊಂದಿಗೆ ದೊಡ್ಡ ಪ್ರಮಾಣದ ಅಕ್ರಮಗಳನ್ನು ಮಾಡಿ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಜನಾದೇಶ ಬಾರದಿದ್ದರೂ ಶಾಸಕರನ್ನು ಖರೀದಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರ ಪಡೆದುಕೊಂಡಿದೆ. ಮಹಿಳೆಯರನ್ನು ಬಳಸಿಕೊಂಡು ಅನೈತಿಕ ಚಟುವಟಿಕೆಗಳ ಮೂಲಕ ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಳ್ಳುವ ಹಂತಕ್ಕೆ ರಾಜಕಾರಣ ತಲುಪಿರುವುದು ಬಹುದೊಡ್ಡ ದುರಂತ. ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದರು.
ಮಹಿಳೆಯರನ್ನು ಬಳಸಿಕೊಳ್ಳುತ್ತಿರುವ ರೀತಿ ಖಂಡನೀಯ:ಭಾರತೀಯ ಸಂಸ್ಕೃತಿಯ ಬಗ್ಗೆ ಪುಖಾಂನುಪುಂಖವಾಗಿ ಮಾತನಾಡುವ ಬಿಜೆಪಿಯವರು ಮಹಿಳೆಯರನ್ನು ಹೀಗೆ ಬಳಸಿಕೊಂಡಿರುವುದು ಖಂಡನೀಯ. ಆಮ್ ಆದ್ಮಿ ಪಾರ್ಟಿಯು ಹಲವು ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 50ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಿಜೆಪಿಯು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಹಿಳೆಯರನ್ನು ಬಳಸಿಕೊಂಡಿದೆ. ಮಹಿಳೆಯರ ವಿಚಾರದಲ್ಲಿ ಎರಡೂ ಪಕ್ಷಗಳಿಗಿರುವ ವ್ಯತ್ಯಾಸವನ್ನು ಇದರಿಂದ ತಿಳಿಯಬಹುದು ಎಂದು ಬ್ರಿಜೇಶ್ ಕಾಳಪ್ಪ ಟೀಕಿಸಿದರು.