ಕರ್ನಾಟಕ

karnataka

ETV Bharat / state

BMS ಟ್ರಸ್ಟ್ ಅಕ್ರಮ ಬಗ್ಗೆ ಪ್ರಧಾನಿ ಮೋದಿಗೆ ದಾಖಲೆ ಸಮೇತ ದೂರು ಕೊಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ - ಸಾರ್ವಜನಿಕ ಟ್ರಸ್ಟ್ ಆಸ್ತಿ

ಭ್ರಷ್ಟಾಚಾರ ಹೊರಬಂದರೆ ಈ ಸರ್ಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಬಿಎಂಎಸ್ ಟ್ರಸ್ಟ್ ಪ್ರಕರಣದ ತನಿಖೆಗೆ ಸರ್ಕಾರ ಸುತರಾಂ ಒಪ್ಪುತ್ತಿಲ್ಲ ಎಂದು ಹೆಚ್​ಡಿಕೆ ದೂರಿದರು.

H D Kumaraswamy
ಎಚ್​ ಡಿ ಕುಮಾರಸ್ವಾಮಿ

By

Published : Sep 23, 2022, 9:18 PM IST

ಬೆಂಗಳೂರು: ಬಿಎಂಎಸ್ ಟ್ರಸ್ಟ್ ಪ್ರಕರಣ ಕುರಿತು ರಾಜ್ಯ ಸರ್ಕಾರ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೆಲ ದಿನಗಳಲ್ಲಿ ನಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಮೊತ್ತ ಮೊದಲಿಗೆ ಪರ್ಸೆಂಟೇಜ್ ವಿಷಯ ಎತ್ತಿದವರೇ ಪ್ರಧಾನಿ ಮೋದಿ ಅವರು. ಕೆಂಪುಕೋಟೆ ಮೇಲೆ ಅಗಸ್ಟ್ 15ರಂದು ಅವರು ಮಾಡಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಷಣದಲ್ಲಿಯೂ ಸೇರಿದಂತೆ ಎಲ್ಲ ಕಡೆ ಕಮಿಷನ್ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಬಿಜೆಪಿ ಪಕ್ಷದ ಸರ್ಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೆ? ಎಂದು ಖಾರವಾಗಿ ಪ್ರಶ್ನಿಸಿದರು.

ಹಾಗೆ ನೋಡಿದರೆ ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸರ್ಕಾರದಲ್ಲಿ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ನಾನೇ ದಾಖಲೆಗಳ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಕಾದು ನೋಡೊಣ, ಪ್ರಧಾನಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಎಂದರು.

ಇದು ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟ್ ಆಸ್ತಿಯನ್ನು ಹೊಡೆದುಕೊಳ್ಳುವ ಭಾರೀ ಹಗರಣ. ಈಗಾಗಲೇ ಬಹಳಷ್ಟು ಅಕ್ರಮಗಳು ನಡೆದು ಹೋಗಿವೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರಬಂದರೆ ಈ ಸರ್ಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರ್ಕಾರ ತನಿಖೆಗೆ ಸುತರಾಂ ಒಪ್ಪುತ್ತಿಲ್ಲ ಎಂದು ದೂರಿದರು.

(ಓದಿ: ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ)

ಅಕ್ರಮ ನಡೆದಿದೆ. ದಾಖಲೆಗಳು ಕಣ್ಣಿಗೆ ಕಟ್ಟಿದಂತೆ ಇವೆ ಎಂದು ಸರ್ಕಾರಕ್ಕೂ ಗೊತ್ತಿದೆ. ಆದರೆ, ಆ ಕಾಣದ ಕೈಗಳು ಅಕ್ರಮದ ತನಿಖೆ ಆಗದಂತೆ ತಡೆಯುತ್ತವೆ ಹಾಗೂ ತನಿಖೆಯ ಕೈ ಕಟ್ಟಿಹಾಕಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿವೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ಏನು ಮಾಡಿಲ್ಲವೆಂದರೆ ತನಿಖೆ ನಡೆಸಲು ಮೀನಾ ಮೇಷ ಏಕೆ? ಭಯ ಏಕೆ? ಎಂದು ಪ್ರಶ್ನೆ ಮಾಡಿದರು.

ಕಿಕ್ ಬ್ಯಾಕ್ ಪಡೆದಿರುವ ಸಚಿವರು:ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರೆ. ನಾನು ಸದನದಲ್ಲಿ ಈ ಮಾತು ಹೇಳಿದಾಗ ಬಿಜೆಪಿ ಪಕ್ಷದ ಯಾವ ಶಾಸಕರಾಗಲಿ, ಸಚಿವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಇಡೀ ಹಗರಣದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಜಗಜ್ಜಾಹೀರಾದ ಹಗರಣ ಎಂದು ಆರೋಪ ಮಾಡಿದರು.

ನಿನ್ನೆ ಮತ್ತು ಇಂದು ವಿಧಾನಸಭೆ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವರ ಬೆಂಬಲಕ್ಕೆ ಆಡಳಿತ ಪಕ್ಷದ ಯಾರೊಬ್ಬರೂ ಬಾರದೆ ಇದ್ದಿದ್ದನ್ನು ನೋಡಿದ ಮೇಲೆ ಮಹಾಭಾರತದ ಪ್ರಸಂಗ ಒಂದು ನೆನಪಾಯಿತು. ದ್ರೌಪದಿಯ ವಸ್ತ್ರಾಪಹರಣ ಆದ ಸಂದರ್ಭದಲ್ಲಿ ಭೀಷ್ಮ, ದ್ರೋಣ ಮುಂತಾದವರೆಲ್ಲ ಮೌನಕ್ಕೆ ಶರಣಾಗಿದ್ದ ರೀತಿಯಲ್ಲಿ ಬಿಜೆಪಿಯ ಸಚಿವ, ಶಾಸಕರು ಮೌನಕೆ ಶರಣಾಗಿದ್ದರು ಎಂದು ಕುಟುಕಿದರು.

ಲೋಕಾಯುಕ್ತಕ್ಕೂ ದೂರು:ಸಚಿವ ಅಶ್ವತ್ಥನಾರಾಯಣ ಸೂಚನೆ ಮೇರೆಗೆ ಅನುಮೋದನೆ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ತನಿಖೆ ನಡೆದರೆ ಸತ್ಯಾಂಶ ಹೊರ ಬರುತ್ತದೆ. ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ನಾನು ಕೇವಲ ಅಶ್ವತ್ಥನಾರಾಯಣ ವಿರುದ್ಧ ಹೋರಾಟ ಮಾಡುವುದಿಲ್ಲ. ಸರ್ಕಾರದ ವಿರುದ್ಧವೂ ನನ್ನ ಹೋರಾಟ ಮುಂದುವರೆಯಲಿದೆ ಎಂದರು.

ಇದು ಕೇವಲ 40 ಪರ್ಸೆಂಟ್ ಕಮಿಷನ್ ಸರ್ಕಾರವಲ್ಲ. ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್ ಕಮಿಷನ್ ಪ್ರಕರಣವನ್ನು. ಇದಕ್ಕಾಗಿಯೇ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ. ಬಿಎಂಎಸ್ ಟ್ರಸ್ಟ್​​ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಂತೆ ತಿದ್ದುಪಡಿ ಮಾಡಿದ್ದಾರೆ. ಈ ಸರ್ಕಾರ ಮುಂದುವರಿಯಲು ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಬಹಳ ಉದ್ಧಟತನ ತೋರುತ್ತಿದೆ. ಇದರಲ್ಲಿ ಹಲವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ABOUT THE AUTHOR

...view details