ಬೆಂಗಳೂರು: ಪಿಎಸ್ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ ದಿನ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಐಡಿ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್.ಸಂಧು ಅವರು ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೇ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಇನ್ನು ಪಿಎಸ್ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರ್ಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನಗಳಲ್ಲಿರುವ ಕಿಂಗ್ಪಿನ್ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.