ಬೆಂಗಳೂರು: ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಅತೀವ ನಿರ್ಲಕ್ಷ್ಯ ವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ಮೇಘನಾ ಎಂಬ ವಿದ್ಯಾರ್ಥಿನಿಯೊಬ್ಬರು ಚಿರತೆಗೆ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಲ ದಿನಗಳ ಹಿಂದೆ ಮತ್ತೊಬ್ಬ ವಿದ್ಯಾರ್ಥಿ ಚಿರತೆ ದಾಳಿಯಿಂದ ಜೀವ ಕಳೆದುಕೊಂಡಿದ್ದ. ಅರಣ್ಯ ಇಲಾಖೆ ಕಾರ್ಯಕ್ಷಮತೆ ಕ್ಷೀಣಿಸಿದ ಕಾರಣಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಹಾಗೆಯೇ, ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದರು ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೆ. ನಂದಿಬೆಟ್ಟದ ಆಸುಪಾಸಿನಲ್ಲಿ ಕೂಡ ಚಿರತೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಜನ ಸಂಚಾರವೇ ಕಷ್ಟವಾಗಿದೆ ಎಂದು ಹೇಳಿದ್ದಾರೆ.