ಬೆಂಗಳೂರು :ಹೆಚ್ ಡಿ ಕುಮಾರಸ್ವಾಮಿಗೆ ಸಂಘ ಪರಿವಾರ ಮತ್ತು ಬಿಜೆಪಿ ಬಗ್ಗೆ ಟೀಕೆ ಮಾಡದೇ ಇದ್ದರೆ ಊಟ ಸೇರಲ್ಲ. ಅವರು ಲಾಟರಿ ಸಿಎಂ ಆಗಿದ್ದವರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕಿಡಿಕಾರಿದರು.
ಹೆಚ್‌ಡಿಕೆ ವಿರುದ್ಧ ಶಾಸಕ ಎಂ ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿರುವುದು.. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಐಟಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಹೆಚ್ಡಿಕೆಗೆ ಸಂಘ ಹಾಗೂ ಬಿಜೆಪಿ ಬಗ್ಗೆ ಟೀಕೆ ಮಾಡದೇ ಇದ್ದರೆ ಊಟ ಸೇರಲ್ಲ. ಕುಮಾರಸ್ವಾಮಿ 2 ಬಾರಿ ಲಾಟರಿ ಸಿಎಂ ಆಗಿದ್ದವರು. ಆದರೆ, ಸಿಎಂ ಅವಧಿ ಎರಡು ಬಾರಿಯೂ ಪೂರ್ಣಗೊಳಿಸಲು ಆಗಿಲ್ಲ. ಈ ಕಾರಣದಿಂದ ಹತಾಶ ಮನೋಭಾವದಿಂದ ಆರೋಪ ಮಾಡಿದ್ದಾರೆ ಎಂದ್ರು.
ಐಟಿ ಸ್ವತಂತ್ರ ಸಂಸ್ಥೆ, ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ. ಐಟಿ ದಾಳಿಗೂ ಯಡಿಯೂರಪ್ಪಗೂ ಸಂಬಂಧ ಇಲ್ಲ. ಆದರೆ, ತಳುಕು ಹಾಕುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಐಟಿ ಯಾರ ಮಾತನ್ನು ಕೇಳಲ್ಲ ಎಂದರು.
ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಕಡಿವಾಣ ಹಾಕಿಲ್ಲ. ಯಡಿಯೂರಪ್ಪ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು. ಯಡಿಯೂರಪ್ಪ ಆಪ್ತರಾಗಿರುವ ನಿಮಗೆ ಐಟಿ ದಾಳಿ ಭಯ ಇದ್ಯಾ? ಎಂಬ ಪ್ರಶ್ನೆಗೆ ನನಗೆ ಯಾವುದೇ ಭಯ ಇಲ್ಲ. ಯಡಿಯೂರಪ್ಪ ನಾನು ಒಂಟಿ ಸಲಗ ಎಂದು ಎಲ್ಲೂ ಹೇಳಿಲ್ಲ. ರಾಷ್ಟ್ರೀಯ, ರಾಜ್ಯ ನಾಯಕರು ಚರ್ಚೆ ಮಾಡಿ ರಾಜ್ಯ ಪ್ರವಾಸ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
ಬಿಎಸ್ವೈಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಅಸೆಂಬ್ಲಿಗೆ ಗೈರಾಗಲ್ಲ. ಅವಶ್ಯಕತೆ ಬಿದ್ದಾಗ ಸದನದಲ್ಲಿ ಉತ್ತಮ ಚರ್ಚೆ ಮಾಡ್ತಾರೆ, ಶಿಸ್ತಿನ ಸಿಪಾಯಿಯಾಗಿ ಇದ್ದಾರೆ. ಆ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ನೀಡಿದ್ದು ಬಿಜೆಪಿ ಅಲ್ಲ, ಬದಲಾಗಿ ಸದನ ಸಮಿತಿ ನೀಡಿದೆ ಎಂದರು.
ಇದನ್ನೂ ಓದಿ:ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಅಶೋಕ್ ಪೂಜಾರಿ