ಬೆಂಗಳೂರು:ಎರಡು ಬಾರಿ ಸಿಎಂ ಆದ ಕುಮಾರಸ್ವಾಮಿ ಅವರು ಬಜೆಟ್‌ಗೆ ಬಂದಿಲ್ಲ.ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು,ಇದು ಪರಿಷ್ಕರಣಾ ಬಜೆಟ್. ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಸಾಧ್ಯವಿಲ್ಲ. ಈ ಬಜೆಟ್ನ್ನು ಎಲ್ಲರೂ ಒಪ್ಪುತ್ತಾರೆ. ವಿರೋಧ ಪಕ್ಷ ಟೀಕಿಸಬಹುದು. ಐದು ಭರವಸೆ ಈಡೇರಿಸಲು ಸಮಸ್ಯೆ ಆಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅನೇಕ ಇಲಾಖೆಗಳಲ್ಲಿ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ನಂದಿನಿ ಬ್ರಾಂಡ್ ಮಾಡಲು ನಿರ್ಧರಿಸಿದ್ದೇವೆ. ನರೇಗಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಮುಂದುವರೆಸುವ ಬಗ್ಗೆಯೂ ಯೋಚಿಸಿದ್ದೇವೆ ಎಂದು ತಿಳಿಸಿದರು. ಇದು ಚೆಂಡು ಹೂ ಮುಡಿಸುವ ಬಜೆಟ್ ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದ ಸಭಾ ನಾಯಕರು ಬಜೆಟ್ನಲ್ಲಿ ಕೂರದೇ ಇರುವವರು ಬಜೆಟ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಅವರಿಗೆ ಮಾತನಾಡುವ ನೈತಿಕತೆ ಏನಿದೆ. ಅವರು ಬಜೆಟ್ ಸದನದಲ್ಲಿ ಕೂತು ಬಳಿಕ ಮಾತನಾಡಬೇಕಿತ್ತು. ಅವರ ಪ್ರತಿಕ್ರಿಯೆ ಹಾಕಲೇ ಬಾರದು. ಅವರು ಬಜೆಟ್ ಭಾಷಣ ಕೇಳಲು ಸದನಕ್ಕೆ ಬಂದಿಲ್ಲ. ಅದಕ್ಕೆ ನಗ ಬೇಕೋ ಅಳಬೇಕೋ ಎಂದು ಚಲುವರಾಯ ಸ್ವಾಮಿ ಟೀಕಿಸಿದರು.
ಸಿದ್ದರಾಮಯ್ಯ ಬಜೆಟ್ದಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ:ಬೆಂಗಳೂರು:ಪಂಚ ಗ್ಯಾರಂಟಿ ಯೋಜನೆಗಳಿಗೆ ಮಹತ್ವ ನೀಡುವುದರ ಜೊತೆಗೆ ಸಿದ್ದರಾಮಯ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ. ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಸದ್ಯದ 3 ಲಕ್ಷ ರೂಗಳಿಂದ 5 ಲಕ್ಷ ರೂ ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶೇ 3ರ ಬಡ್ಡಿ ದರದಲ್ಲಿ ನೀಡುವ ಮಾಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂಗಳಿಂದ 15 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೋದಾಮ ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇಕಡಾ 7ರಷ್ಟು ಬಡ್ಡಿ ಸಹಾಯಧನ ನೀಡಲಿದೆ.