ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಸಿಂಗಾಪುರ್ಗೆ ತೆರಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಸಹ ಸಿಂಗಾಪುರ್, ಅಮೆರಿಕಾ ಮತ್ತಿತರ ದೇಶಗಳಿಗೆ ಪ್ರವಾಸ ಮಾಡಿದ್ದರು. ಇನ್ನು ಸಿಂಗಾಪುರ್ಗೆ ಆಗಾಗ ಹೋಗಿ ಬರುವುದು ಸಾಮಾನ್ಯವಾಗಿತ್ತು. ಇದೀಗ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಸಿಂಗಾಪುರ್ ಪ್ರಯಾಣ ಬೆಳೆಸಿದ್ದಾರೆ.
ಕಳೆದ ಎರಡು-ಮೂರು ವರ್ಷಗಳಿಂದ ಹೊಸ ವರ್ಷಾಚರಣೆಯನ್ನು ಅಲ್ಲೇ ಆಚರಿಸುತ್ತಿದ್ದ ಕುಮಾರಸ್ವಾಮಿ, ಈ ಬಾರಿಯೂ ಹೊಸ ವರ್ಷವನ್ನು ಅಲ್ಲೇ ಆಚರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉಪ ಚುನಾವಣೆ ಸೋಲು, ರಾಜಕೀಯ ಚಟುವಟಿಕೆಗಳಿಂದ ಸ್ವಲ್ಪ ಮಟ್ಟಿಗೆ ದೂರವೇ ಉಳಿದಿರುವ ಹೆಚ್ಡಿಕೆ, ಕುಟುಂಬದೊಂದಿಗೆ ಸಿಂಗಾಪುರ್ಗೆ ತೆರಳಿದ್ದಾರೆ. ಇವರ ಜೊತೆ ಜೆಡಿಎಸ್ನ ಕೆಲ ಆಪ್ತ ನಾಯಕರೂ ತೆರಳಿದ್ದಾರೆ. ಜನವರಿ 2ರಂದು ಅವರು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.