ಬೆಂಗಳೂರು:ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕವನ್ನು 25ಕ್ಕೆ ಕಡಿತಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಕೆಪಿಎಸ್‌ಸಿ ಇತ್ತೀಚಿನ ದಿನಗಳಲ್ಲಿ ಬದಲಾವಣೆಯ ನೆಪದಲ್ಲಿ ಸರ್ವಸಮ್ಮತವಾದ ಮತ್ತು ಬಹುಕಾಲದಿಂದ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ಸಾಗುವಂತೆ ಕಂಡು ಬರುತ್ತಿದೆ. ಇಂತಹ ದೂರದೃಷ್ಟಿಯಿಲ್ಲದ ಬದಲಾವಣೆಗಳಿಂದ ಭವಿಷ್ಯದಲ್ಲಿ ಉತ್ತಮ ಮತ್ತು ಕಾರ್ಯದಕ್ಷತೆವುಳ್ಳ ಅಧಿಕಾರಿಗಳನ್ನು ಆಯ್ಕೆಮಾಡಲು ಕಷ್ಟವಾಗಬಹುದು ಎಂದು ಹೇಳಿದ್ದಾರೆ.
ಕೆಪಿಎಸ್‌ಸಿಯಲ್ಲೂ ಕಾಲಕಾಲಕ್ಕೆ ಬದಲಾವಣೆ ಅಗತ್ಯ. ಆದರೆ, ಅಂತಹ ಬದಲಾವಣೆಗಳು ಸಮ್ಮತವಾಗಿರಬೇಕು ಮತ್ತು ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲೇ ಇರಬೇಕು ಎಂದಿದ್ದಾರೆ.