ಕರ್ನಾಟಕ

karnataka

By

Published : Jul 8, 2019, 3:30 PM IST

ETV Bharat / state

ಅತೃಪ್ತ ಶಾಸಕರನ್ನು ಕರೆತರಲು ಹೆಚ್.ಡಿ.ರೇವಣ್ಣ ಮತ್ತು ತಂಡ ಸಿದ್ದ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿ, ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ತಮ್ಮ ಶಾಸಕರ ಮನವೊಲಿಸಲು ಜೆಡಿಎಸ್ ಮುಂದಾಗಿದೆ.

ಹೆಚ್.ಡಿ.ರೇವಣ್ಣ ಮತ್ತು ತಂಡ

ಬೆಂಗಳೂರು : ಅತೃಪ್ತ ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಸಚಿವರಾದ ಹೆಚ್.ಡಿ. ರೇವಣ್ಣ, ಸಾ.ರಾ. ಮಹೇಶ್ ಹಾಗೂ ಸಿ.ಎಸ್. ಪುಟ್ಟರಾಜು ಅವರಿಗೆ ವಹಿಸಲಾಗಿದೆ ಎನ್ನಲಾಗುತ್ತಿದೆ.

ಮಾಜಿ ಸಚಿವ ಹೆಚ್.ವಿಶ್ವನಾಥ್, ಶಾಸಕರಾದ ಗೋಪಾಲಯ್ಯ, ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೊಟೇಲ್‍ನಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಮನವೊಲಿಸಿ ಬೆಂಗಳೂರಿಗೆ ಕರೆತಂದು ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಲು ಈ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಶಾಸಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಬೇಕು. ನಾಯಕತ್ವ ಬದಲಾವಣೆಗೆ ಒಪ್ಪದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲೇ ಮುಂದುವರಿಯಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಪಕ್ಷದ ಎಲ್ಲ ಶಾಸಕರೂ ಒಗ್ಗಟ್ಟಿನಿಂದಿದ್ದು, ಮತ್ತೆ ಆಪರೇಷನ್ ಕಮಲಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಲು ಜೆಡಿಎಸ್ ವರಿಷ್ಠರು ತಮ್ಮ ಶಾಸಕರಿಗೆ ಸಲಹೆ ಮಾಡಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರೊಂದಿಗಿನ ಮಾತುಕತೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದು, ನಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಕಾಂಗ್ರೆಸ್‍ನ ಅತೃಪ್ತ ಶಾಸಕರ ಮನವೊಲಿಸಿ ರಾಜೀನಾಮೆ ಹಿಂಪಡೆಯುವ ಪ್ರಯತ್ನವನ್ನು ಆ ಪಕ್ಷದ ನಾಯಕರು ಮಾಡಲಿದ್ದಾರೆ. ಮುಂದೆ ಯಾವುದೇ ಪರಿಸ್ಥಿತಿ ಎದುರಾದರೂ ಯಾರೂ ವಿಚಲಿತರಾಗದೆ ದೃಢ ಮನಸ್ಸಿನಿಂದ ಎದುರಿಸಬೇಕು. ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಬಳಸಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಕೊನೆಗಳಿಗೆವರೆಗೂ ಮಾಡುವುದಾಗಿ ಜೆಡಿಎಸ್ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details