ಬೆಂಗಳೂರು :ಬಿಜೆಪಿ ಸರ್ಕಾರವನ್ನುಹೇಗೆ ರಿಪೇರಿ ಮಾಡಬೇಕು ಎಂದು ನಮಗೆ ಗೊತ್ತಿದೆ, ನಾವು ಮಾಡುತ್ತೇವೆ. ನಮಗೂ ಕಾಲ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಹೇಗೆ ನಡೆದಿದೆ? ಎಂಬುದು ಗೊತ್ತು. ಒಂದೊಂದು ಕ್ಷೇತ್ರದಲ್ಲಿ 50 ರಿಂದ 60 ಕೋಟಿ ರೂ ಖರ್ಚು ಮಾಡಿದ್ದಾರೆ. ಅದನ್ನೆಲ್ಲಾ ಪ್ರತ್ಯೇಕವಾಗಿ ಬಹಿರಂಗ ಪಡಿಸುತ್ತೇನೆ ಎಂದರು.
ಇನ್ನು ಲೋಕೋಪಯೋಗಿ ಇಲಾಖೆಯ 570 ಸಹಾಯಕ ಇಂಜಿನಿಯರ್ ಹಾಗೂ 300 ಕಿರಿಯ ಇಂಜಿನಿಯರ್ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ಆಯ್ಕೆ ಪರೀಕ್ಷೆ ನಡೆಸಲಾಗಿದೆ. 64,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸುಮಾರು 2 ಕೋಟಿ ರೂ. ಪರೀಕ್ಷಾ ಶುಲ್ಕ ಪಡೆದಿದ್ದಾರೆ. ಕೊನೇಯ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿದ್ದಾರೆ. ಇದರಿಂದಾಗಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಬೇಕಾದರೆ ಸಿಬಿಐನಿಂದ ತನಿಖೆ ಮಾಡಿಸಲಿ ಎಂದರು. ಪಾರದರ್ಶಕ ರೀತಿಯಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ ಈಗ ಪರೀಕ್ಷಾ ಪ್ರಾಧಿಕಾರವೇ ಸರಿಯಲ್ಲ ಎಂದರೆ ಹೇಗೆ ರೇವಣ್ಣ ಪ್ರಶ್ನಿಸಿದರು.
ಕೆಪಿಎಸ್ಸಿಯಲ್ಲಿ ಸದಸ್ಯರ ಮೂಲಕ ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸಬಹುದು ಎಂದು ಬಿಜೆಪಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆಯೋಗದ ಮೇಲೆ ಯಡಿಯೂರಪ್ಪನವರಿಗೆ ಬಹಳ ನಂಬಿಕೆ ಎಂದು ವ್ಯಂಗ್ಯವಾಡಿದರು. ಸರ್ಕಾರ ರಾಜಕೀಯ ದ್ವೇಷ ಮತ್ತು ಹಗೆತನದಿಂದ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಮುಂದಾಗಿದೆ ಎಂದು ಅವರು ಹೇಳಿದರು.