ಬೆಂಗಳೂರು:ಪುರಸಭೆ ಹಾಗೂ ನಗರಸಭೆಗಳ ಅಧ್ಯಕ್ಷರ ಚುನಾವಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕುದುರೆ ವ್ಯಾಪಾರ ನಡೆಯುತ್ತದೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ಗಳ ಚುನಾವಣೆ ನಡೆದು ವರ್ಷವಾಯಿತು. ಆದರೆ ಅಧ್ಯಕ್ಷರ ನೇಮಕ ಕಾರ್ಯ ಆಗಿಲ್ಲ. ಈಗ ಚುನಾವಣೆ ನಡೆಸುವ ಸಂಬಂಧ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಆದರೆ ಈ ವಾರದಲ್ಲಿ ಚುನಾವಣೆ ನಡೆಸಬೇಕಿದ್ದ ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಆದಷ್ಟು ಬೇಗ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ಗಳ ಅಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಉದ್ದೇಶ ನಮಗಿದೆ. ಆದರೆ, ಮೀಸಲಾತಿಗೆ ತಕ್ಕಂತೆ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದರು. ನನ್ನದೇ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಸ್ಥಾನ ಮೀಸಲಾಗಿದೆ. ಆದರೆ ಪರಿಶಿಷ್ಟ ಪಂಗಡದ ಮಹಿಳೆ ಆಯ್ಕೆಯಾಗಿಲ್ಲ. ಇದೇ ತರಹ ಅನೇಕ ಕ್ಷೇತ್ರಗಳಲ್ಲಿ ಆಗಿದೆ. ಹೀಗಾಗಿ ಸ್ವಲ್ಪ ಕಾಲ ತಡೆದುಕೊಳ್ಳಬಹುದು ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಹೆಚ್.ಡಿ.ರೇವಣ್ಣ, ಯಾವ ಕ್ಷೇತ್ರಗಳಲ್ಲಿ ಸಮಸ್ಯೆ ಆಗಿದೆಯೋ ಅಂತಹ ಕ್ಷೇತ್ರಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿ. ಆದರೆ ಉಳಿದ ಕ್ಷೇತ್ರಗಳಲ್ಲಿ ತಕ್ಷಣವೇ ನಡೆಸಿ ಎಂದು ಆಗ್ರಹಿಸಿದರು. ಚುನಾವಣೆ ನಡೆಸುವ ಸಂಬಂಧ ಮೀಸಲಾತಿ ಪ್ರಕಟವಾದೊಡನೆ ಕುದುರೆ ವ್ಯಾಪಾರ ಶುರುವಾಗಿದೆ. ಇದಕ್ಕೆ ತಡೆ ಒಡ್ಡದಿದ್ದರೆ ಸಮಸ್ಯೆ ಆಗುತ್ತದೆ. ಹಾಗಾಗಲು ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.