ಬೆಂಗಳೂರು: ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
"ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ," ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ! ಎಂದು ಟ್ವೀಟ್ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ 'ಅಧಿಕಾರ ರಾಮ ಜಪ' ಕಾಲು ಭಾಗಕ್ಕೂ ಸಾಲದು ಎಂದಿದ್ದಾರೆ.
ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿದೆ. ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ. ಅದರ ಫಲವನ್ನೂ ಉಣ್ಣಲಿ ಎಂದಿದ್ದಾರೆ ಹೆಚ್ಡಿಕೆ.
ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದರೆ, ನಾನಾಗಲಿ, ನನ್ನ ಕುಟುಂಬವಾಗಲಿ ಈಗ ದೇಶದಲ್ಲಿ ಕೆಲವರಿಂದ ನಡೆಯುತ್ತಿರುವ ಧಾರ್ಮಿಕ ಭ್ರಷ್ಟಾಚಾರದಂಥ ಕೃತ್ಯ ಮಾಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.