ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು, ಸಚಿವರಾಗಿದ್ದವರು ಹಾಗೂ ಉಪಮುಖ್ಯಮಂತ್ರಿ ಆಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಹೋದರು ಎಂದು ಕೋಲಾರದಲ್ಲಿ ನಮ್ಮ ಯಾವುದೇ ಕಾರ್ಯತಂತ್ರ ಬದಲಾಗಲ್ಲ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯ ಅಷ್ಟೇ ಅಲ್ಲ, ಯಾರೇ ನಿಂತರೂ ನಮ್ಮ ಪಕ್ಷಕ್ಕೆ ಆತಂಕ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಸಮಸ್ಯೆಯೇ ಶ್ರೀನಿವಾಸ್ ಗೌಡರು: ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎಂದರೆ ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದ ಹಾಲಿ ಶಾಸಕ ಶ್ರೀನಿವಾಸ್ ಗೌಡರು. ಅವರು ನಮಗೆ ಮಾಡಿದ ದ್ರೋಹವೇ ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ. ಸಿದ್ದರಾಮಯ್ಯ ಅವರಿಗೆ ನಕಾರಾತ್ಮಕ ಅಂಶಗಳು ಇರುವುದೇ ಅಲ್ಲಿ. ಹೀಗಾಗಿ ನಮ್ಮ ಪಕ್ಷಕ್ಕೆ ಆತಂಕ ಏನೂ ಇಲ್ಲ. ಬಹುತೇಕ ಎಲ್ಲ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಕೂಡ ಅದೇ ಲೆಕ್ಕದಲ್ಲಿ ಕೋಲಾರಕ್ಕೆ ಹೋಗಿರಬಹುದು ಎಂದರು.
ಚಾಮುಂಡೇಶ್ವರಿ, ಬಾದಾಮಿಯಲ್ಲೂ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನಾನು ಮೂರು ದಿನ ಬದಾಮಿಗೆ ಹೋಗದೆ ಇದ್ದಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು. ಗುಳೇದಗುಡ್ಡ ಸೇರಿದಂತೆ ಹಲವೆಡೆ ನಾನು ಅಂತಿಮ ಕ್ಷಣದಲ್ಲಿ ಪ್ರಚಾರ ಮಾಡಿದ್ದೆ, ಜನರಿಂದ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಅಭ್ಯರ್ಥಿ 28 ಸಾವಿರ ಮತ ಪಡೆದರು. ಆಗ ಸಿದ್ದರಾಮಯ್ಯ ಚಿಕ್ಕ ಅಂತರದಲ್ಲಿ ಗೆದ್ದರು. ಇಲ್ಲವಾಗಿದ್ದರೆ ಹತ್ತು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. ಹಾಗೆ ನೋಡಿದರೆ ಅವರ ಗೆಲುವಿಗೆ ನಾನೇ ಕಾರಣ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ನನ್ನಿಂದ ರಾಜಕೀಯ ಮರುಜನ್ಮ ಸಿಕ್ಕಿದೆ. ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಾಭಿಪ್ರಾಯಕ್ಕಿಂತ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಮಿಷನ್ 123 ಗುರಿಯಲ್ಲಿ ಕೋಲಾರ ಕ್ಷೇತ್ರವೂ ಒಂದು. ಈ ಬಗ್ಗೆ ನಾವು ಎಚ್ಚರ ತಪ್ಪುವುದಿಲ್ಲ ಎಂದರು.
18 ಅಥವಾ 20ರಂದು ಪಂಚರತ್ನ ರಥಯಾತ್ರೆ: ಈ ತಿಂಗಳ 18 ಅಥವಾ 20ರಂದು ಪಂಚರತ್ನ ರಥಯಾತ್ರೆ ಮತ್ತೆ ಆರಂಭ ಮಾಡಲಾಗುವುದು. ಈ ಎರಡು ದಿನದಲ್ಲಿ ಒಂದು ದಿನಾಂಕವನ್ನು ಇನ್ನೆರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕೆಂಪೇಗೌಡರ ಪ್ರತಿಮೆ ನಿಲ್ಲಿಸಿ ಬಿಟ್ಟರೆ ಒಕ್ಕಲಿಗರ ನಾಯಕರಾಗಲ್ಲ: ಬಿಜೆಪಿಯಲ್ಲಿ ಒಕ್ಕಲಿಗ ನಾಯಕರ ಬೆಳವಣಿಗೆಯನ್ನು ಕುಮಾರಸ್ವಾಮಿ ಅವರು ಸಹಿಸುತ್ತಿಲ್ಲ ಎಂದು ಬಿಜೆಪಿಯ ಕೆಲ ನಾಯಕರು ನೀಡಿರುವ ಹೇಳಿಕೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾನು ಎರಡು ಕಡೆಗಳಲ್ಲಿ ನಾಡಪ್ರಭುಗಳ ಪ್ರತಿಮೆ ಅನಾವರಣ ಮಾಡಿ ಬಂದೆ. ಹಾಗಂತ ನನ್ನ ಜೊತೆ ಜನರು ಓಡಿ ಬರ್ತಾರಾ? ಕೆಂಪೇಗೌಡರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದರೆ ಜನರು ಗೌರವ ನೀಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರತಿಮೆ ಅನಾವರಣ ಮಾಡಿರೋದಕ್ಕೂ, ಮುಂದಿನ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನೆರೆ, ಬರ ಬಂದಾಗ ಜನರು ಬೀದಿಗೆ ಬಂದರು. ಜೀವಂತ ಪ್ರತಿಮೆಗಳಿಗೆ ಈ ನಾಯಕರು ಏನು ಕೊಟ್ಟಿದ್ದಾರೆ? ಹಾಗೆ ನೋಡಿದರೆ ಒಕ್ಕಲಿಗ ಸಮಾಜಕ್ಕೆ ಬಿಜೆಪಿಯ ಕೊಡುಗೆ ಏನು? ಕೆಂಪೇಗೌಡರ ಪ್ರತಿಮೆ ಮಾಡಿ ಹೆಸರಿನಲ್ಲಿ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಅದೇ ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ನುಂಗಿದ ಕಾರಣಕ್ಕೆ ಬಿಜೆಪಿಯವರನ್ನು ಗಿನ್ನೆಸ್ ದಾಖಲೆಗೆ ಸೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.