ಬೆಂಗಳೂರು: ಜೆಡಿಎಸ್ ವಿರುದ್ಧ ನೀಡಿರುವ ಟೀಕೆಗಳಿಗೆ ಸದನದಲ್ಲಿ ಉತ್ತರ ಕೊಡುವುದರ ಜೊತೆಗೆ ಯರ್ಯಾರು ಏನೇನು ಬಿಸ್ನೆಸ್ ಮಾಡಿದ್ದಾರೆ ಎಂಬುದನ್ನು ಬಿಚ್ಚಿಡುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆಗೆ ಬಗ್ಗೆ ಚರ್ಚೆಯಾಗಿದೆ. ಆಡಳಿತ ಪಕ್ಷದ ಶಾಸಕ ಸಿ.ಟಿ.ರವಿ ಸೇರಿದಂತೆ ಯಾರ್ಯಾರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದರು.
ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಅಧಿವೇಶನಕ್ಕೆ ಬರಲಾಗಿರಲಿಲ್ಲ. ಸದನದಲ್ಲಿ ರಾಜ್ಯದ ಸಮಸ್ಯೆಗಿಂತ ಹೆಚ್ಚಾಗಿ ದೇಶ, ವಿದೇಶಗಳ ಚರ್ಚೆ ನಡೆಸಲಾಗಿದೆ. ಬ್ಯುಸಿನೆಸ್ ಮಾಡಲು ಯಾರಾದರು ಬರಲಿ ಎಂದು ಕಾಯುತ್ತಿರುತ್ತಾರೆ ಎಂದು ಆರೋಪ ಮಾಡಿದ್ದಾರೆ. ಅವರ ನಾಯಕರ ಬಗ್ಗೆ ಯರ್ಯಾರು ಏನೇನು ಮಾತನಾಡಿದ್ದಾರೆ ಎಂಬುದನ್ನು ಸದನದ ಗಮನಕ್ಕೆ ತರುತ್ತೇನೆ. ಕೆಜೆಪಿಯಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏನು ಆರೋಪ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ನ ಕೇಂದ್ರ ಸ್ಥಾನವೇ ನಾನು. ಬಿಜೆಪಿಯ ಬಿ ಟೀಮ್ ಎಂದು ಒಬ್ಬರು ಮತ್ತೊಬ್ಬರು ಕಾಂಗ್ರೆಸ್‍ನ ಬಿ ಟೀಂ ಎಂದು ಮತ್ತೊಬ್ಬರು ಆರೋಪಿಸುತ್ತಾರೆ. ವಿರೋಧ ಪಕ್ಷದ ನಾಯಕರು ಅಧಿಕಾರ ಹಸ್ತಾಂತರ ಮಾಡದೇ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣ ಎಂದು ಹೇಳಿರುವುದಾಗಿ ತಿಳಿಸಿದರು.
ಶೃಂಗೇರಿ ಮಠದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಅಲ್ಲಿ ಬೇರೆ ರೀತಿಯ ಸಂಪ್ರದಾಯವಿದೆ. ಟಿಪ್ಪು, ಸಾವರ್ಕರ್ ಸೇರಿದಂತೆ ಹಲವರು ಅಮರರಾಗಿದ್ದಾರೆ. ಆದರೆ, ಜೀವಂತವಾಗಿರುವ ನಮ್ಮ ಜನಗಳ ಬಗ್ಗೆ ಚರ್ಚೆಯಾಗಬೇಕಲ್ಲವೆ ಎಂದು ಪ್ರಶ್ನಿಸಿದ ಅವರು, ಸಚಿವ ಅಶ್ವಥನಾರಾಯಣ ಅವರು ಮಾತನಾಡುವ ಹುಮ್ಮಸ್ಸಿನಲ್ಲಿ ಹೃದಯದಲ್ಲಿರುವುದನ್ನು ಹೊರಗೆ ಹಾಕಿದ್ದಾರೆ. ಟಿಪ್ಪು ಶೃಂಗೇರಿ ದೇವಾಲಯಕ್ಕೆ ರಕ್ಷಣೆ ಕೊಟ್ಟಿದ್ದಾರೆ. ಈ ನಾಡಿಗೆ ರೇಷ್ಮೆ ತಂದಿದ್ದಾರೆ. ಇದನ್ನು ಹೇಳಬೇಕಲ್ಲವೆ. ಬಿಜೆಪಿ ಅವರು ಟಿಪ್ಪು ವಿಚಾರದಲ್ಲಿ ವಿವಾದಾತ್ಮಕ ವಿಚಾರಗಳ ಬಗ್ಗೆ ಬಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಯಾರಿಗೂ ಚಿತ್ರಹಿಂಸೆ ಕೊಡಬಾರದು. ಹಾಗೆ ಮಾಡಿದರೆ ವಿಕೃತ ಮನಸ್ಥಿತಿ ಎಂದರು.