ಬೆಂಗಳೂರು: ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸಿದ್ದಕ್ಕಾಗಿ ಸಚಿವ ಡಾ. ಕೆ.ಸುಧಾಕರ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಚಿವ ಸುಧಾಕರ್ಗೆ ಕುಮಾರಸ್ವಾಮಿ ಕೃತಜ್ಞತೆ
ಕೊರೊನಾ ಸೋಂಕಿಗೆ ಒಳಗಾದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಬೆಡ್ ಕಾದಿರಿಸಿದ ಸಚಿವ ಡಾ. ಕೆ.ಸುಧಾಕರ್ಗೆ ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
''ನನಗೆ ಇಂದು ಬೆಳಗ್ಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮಂಜುನಾಥ್ ಹಾಗೂ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸಿದ್ದರು'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಸುಧಾಕರ್ ಅವರು ತುರ್ತಾಗಿ ಸ್ಪಂದಿಸಿ ನನ್ನೊಂದಿಗೆ ಮಾತನಾಡಿದರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಹೇಳಿದ್ದಾರೆ. ಇನ್ನು ನ್ಯಾಯಾಲಯದ ಪ್ರಕರಣವೊಂದರ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ ಆಗಬೇಕಾಗಿದ್ದರಿಂದ ಮಧ್ಯಾಹ್ನದ ನಂತರ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದೇನೆ. ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯಲ್ಲೇ ಕೊರೊನಾ ಚಿಕಿತ್ಸೆ ಪಡೆಯಲು ತೀರ್ಮಾನಿಸಿ, ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಎಲ್ಲರಿಗೂ ನನ್ನ ಪ್ರಣಾಮಗಳು ಎಂದಿದ್ದಾರೆ.