ಬೆಂಗಳೂರು :ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಹತ್ವಾಕಾಂಕ್ಷೆಯ 'ಕಾಂಪಿಟ್ ವಿತ್ ಚೈನಾ' ಯೋಜನೆ ಘೋಷಿಸಿದ್ದರು. ಚೀನಾದ ಉತ್ಪನ್ನಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕಾಂಪೀಟ್ ವಿತ್ ಚೀನಾ ಪರಿಕಲ್ಪನೆಯೊಂದಿಗೆ 2018ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದರು. ಆದರೆ, ವಾಸ್ತವದಲ್ಲಿ ಈ ಯೋಜನೆ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಟೇಕ್ ಆಫ್ ಕಾಣಲು ಸಾಧ್ಯವಾಗಿಲ್ಲ.
ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ 2018ರ ಬಜೆಟ್‌ನಲ್ಲಿ 'ಕಾಂಪಿಟ್ ವಿತ್ ಚೈನಾ' ಯೋಜನೆ ಘೋಷಿಸಿದ್ದರು. 9 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ತಲಾ 2 ಸಾವಿರ ಕೋಟಿ ರೂ. ಸರ್ಕಾರದಿಂದ ನೀಡಲು ನಿರ್ಧರಿಸಲಾಗಿತ್ತು. ಖಾಸಗಿಯಿಂದ ತಲಾ 3 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು.
ಆಟಿಕೆ, ಮೊಬೈಲ್ ಉಪಕರಣಗಳು, ಬಾಥ್‌ರೂಂ ಫಿಟ್ಟಿಂಗ್ಸ್, ವಿದ್ಯುತ್ ಉಪಕರಣಗಳಂತಹ ಉತ್ಪನ್ನಗಳನ್ನು ಕ್ಲಸ್ಟರ್‌ವಾರು ಅಭಿವೃದ್ಧಿಪಡಿಸುವು ಗುರಿ ಹೊಂದಲಾಗಿತ್ತು. ಕೌಶಲ ಆಧರಿತ ಉದ್ಯಮಗಳ ಸ್ಥಾಪನೆ ಮೂಲಕ ಚೀನಾದ ಕಂಪನಿಗಳೊಂದಿಗೆ ಪೈಪೋಟಿ ನಡೆಸುವುದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವುದು ಯೋಜನೆಯ ಮೂಲ ಉದ್ದೇಶವಾಗಿದೆ.
ಕಾಂಪೀಟ್ ವಿತ್ ಚೀನಾ ಮೂಲಕ ಎಲ್ಲೆಲ್ಲಿ ಕೈಗಾರಿಕಾ ಕ್ಲಸ್ಟರ್?:ಕಾಂಪೀಟ್ ವಿತ್ ಚೀನಾ ಮೂಲಕ ಕಲಬುರಗಿ, ಕೊಪ್ಪಳ, ಮೈಸೂರು, ತುಮಕೂರು, ಚಿತ್ರದುರ್ಗ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಬೀದರ್‌ನಲ್ಲಿ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಕಲಬುರಗಿ ವಲಯದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅಗತ್ಯ ಬಿಡಿ ಭಾಗಗಳನ್ನು ಉತ್ಪಾದಿಸುವ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿತ್ತು.
ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ ಎಲ್‌ಇಡಿ ಲೈಟ್‌ಗಳನ್ನು ಉತ್ಪಾದಿಸುವ ಉದ್ಯಮವನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿತ್ತು. ಹಾಸನ ಜಿಲ್ಲೆಯನ್ನು ಸ್ನಾನಗೃಹ, ನೆಲಹಾಸು ಹಾಗೂ ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುವುದು, ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ತಯಾರಿಕಾ ಉದ್ಯಮ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ICB ಚಿಪ್‌ಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು, ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಭಾಗಗಳ ತಯಾರಿಕೆಯ ಉದ್ಯಮ ಹಾಗೂ ತುಮಕೂರು ಜಿಲ್ಲೆಯಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್ ವಸ್ತುಗಳ ತಯಾರಿಕೆ ಮಾಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿತ್ತು. ಇನ್ನು ಬೀದರ್ ಜಿಲ್ಲೆಯಲ್ಲಿ ಯಂತ್ರೋಪಕರಣಗಳ ಉತ್ಪಾದನೆಗೆ ಯೋಜನೆ ರೂಪಿಸಲಾಗಿತ್ತು.
ಈ ಯೋಜನೆ ಮೂಲಕ ಉತ್ಪಾದನಾ ಸಂಬಂಧಿತ ಚಟುವಟಿಕೆಗಳನ್ನು ಗ್ರಾಮ ಮಟ್ಟದಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದವರೆಗೆ ಕೊಂಡೊಯ್ಯಲು ಉದ್ದೇಶಿಲಾಗಿದೆ. ಯೋಜನೆ ಜಾರಿ ಮಾಡಿ ಪ್ರತಿ ಕ್ಲಸ್ಟರ್‌ಗೆ ವಿಷನ್ ಗ್ರೂಪ್ ಹಾಗೂ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆಯಾ ಉದ್ಯಮ ವಲಯಗಳ ವಿಷನ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಇವುಗಳು ನೀಡುವ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ.
ಪೂರ್ಣ ಪ್ರಮಾಣದಲ್ಲಿ ಟೇಕ್ ಆಫ್ ಆಗದ ಯೋಜನೆ :ಹೆಚ್ಡಿಕೆ ಅಧಿಕಾರದಿಂದ ಕೆಳಗೆ ಇಳಿದ ಬಳಿಕ ಯೋಜನೆ ಅನುಷ್ಠಾನದ ಪ್ರಗತಿ ಅಷ್ಟಕಷ್ಟೇ.. ರಾಜತಾಂತ್ರಿಕ ಕಾರಣದಿಂದ ಕಾಂಪೀಟ್ ವಿತ್ ಚೀನಾ ಹೆಸರನ್ನು ಕೈಬಿಡಲಾಗಿದೆ. ಅದರ ಬದಲು ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಯೋಜನೆ ಎಂದು ಬದಲಾಯಿಸಲಾಗಿದೆ.