ಕರ್ನಾಟಕ

karnataka

ETV Bharat / state

ಬಿಎಂಎಸ್ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ನೇರ ಶಾಮೀಲು: ಹೆಚ್​ ಡಿ ಕುಮಾರಸ್ವಾಮಿ ಆರೋಪ - ಬಿಎಂಎಸ್ ಟ್ರಸ್ಟ್ ಸರ್ಕಾರದ ಸ್ವತ್ತು

ಬಿಎಂಎಸ್ ಟ್ರಸ್ಟ್ ಸರ್ಕಾರದ ಸ್ವತ್ತು- ಅದು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ- ವಿಧಾನ ಮಂಡಲ ಅಧಿವೇಶನದಲ್ಲಿ ಸಚಿವ ಅಶ್ವತ್ಥನಾರಾಯಣ ಸುಳ್ಳು ಮಾಹಿತಿ ನೀಡಿದ್ದಾರೆ - ಹೆಚ್​ಡಿಕೆ ಆರೋಪ

Minister Ashwathnarayan with Dayananda Pai photo
ಸಚಿವ ಅಶ್ವತ್ಥನಾರಾಯಣ ದಯಾನಂದ ಪೈ ಜತೆಗಿರುವ ಭಾವಚಿತ್ರ

By

Published : Feb 8, 2023, 6:27 AM IST

Updated : Feb 8, 2023, 6:37 AM IST

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರ ಜಾತಿ ವಿಚಾರ ಹೇಳಿಕೆ ಮತ್ತು ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಇದೀಗ ಸಚಿವ ಅಶ್ವತ್ಥನಾರಾಯಣ್​ ವಿರುದ್ಧ ಬಾಂಬ್​ ಸಿಡಿಸಿದ್ದಾರೆ. ಬಿಎಂಎಸ್ ಟ್ರಸ್ಟ್ ಹಗರಣದ ವಿಚಾರದಲ್ಲಿ ತಾವು ಕ್ಲೀನ್ ಎಂದು ವಿಧಾನಸಭೆಯಲ್ಲಿ ಬಡಾಯಿ ಕೊಚ್ಚಿಕೊಂಡಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸಾರ್ವಜನಿಕ ಸ್ವತ್ತಾದ ಆ ಟ್ರಸ್ಟ್ ಅನ್ನು ಹೊಡೆದುಕೊಂಡ ವ್ಯಕ್ತಿಯ ಜತೆ ನೇರ ಶಾಮೀಲಾಗಿದ್ದಾರೆ ಎಂದು ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಫೋಟೋ ಬಿಡುಗಡೆ: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಎಂಎಸ್ ಟ್ರಸ್ಟ್ ಅನ್ನು ಹೈಜಾಕ್ ಮಾಡುತ್ತಿರುವ ಉದ್ಯಮಿ ದಯಾನಂದ ಪೈ ಹಾಗೂ ಸಚಿವ ಅಶ್ವತ್ಥನಾರಾಯಣ ಇಬ್ಬರೂ ಕುಟುಂಬ ಸಮೇತ ನಿಕಟವಾಗಿ ಆಪ್ತ ಮಾತುಕತೆಯಲ್ಲಿ ತೊಡಗಿರುವ ಫೋಟೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಬಿಎಂಎಸ್ ಟ್ರಸ್ಟ್ ಖಾಸಗಿಯರ ಪಾಲಾಗಲು ಬಿಡುವುದಿಲ್ಲ: ಬಿಎಂಎಸ್ ಟ್ರಸ್ಟ್ ಸರ್ಕಾರದ ಸ್ವತ್ತು. ಅದು ಖಾಸಗಿಯವರ ಪಾಲಾಗಲು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ಆ ಟ್ರಸ್ಟ್ ಅನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತನಿಖೆಗೆ ಒಪ್ಪದ ಸರ್ಕಾರ: ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿ ಶಕ್ತಿಗಳ ಪಾಲಾಗುವಲ್ಲಿ ಸಚಿವ ಅಶ್ವತ್ಥನಾರಾಯಣ ಪಾತ್ರ ದೊಡ್ಡದು. ಅದಕ್ಕೆ ಈ ಫೋಟೋ ಕೂಡ ಒಂದು ಸಾಕ್ಷಿ. ಈಗಾಗಲೇ ನಾನು ಸದನದಲ್ಲಿ ಅನೇಕ ಮಹತ್ವದ ಸಾಕ್ಷ್ಯಗಳನ್ನು ಮಂಡಿಸಿದ್ದೇನೆ. ಆದರೆ, ಸರ್ಕಾರ ತನಿಖೆಗೆ ಒಪ್ಪಲಿಲ್ಲ ಎಂದು ಹೆಚ್​ಡಿಕೆ ತೀವ್ರ ವಾಗ್ದಾಳಿ ನಡೆಸಿದರು.

ಕಲಾಪದಲ್ಲಿ ಸುಳ್ಳು ಹೇಳಿಕೆ: ಸಚಿವ ಅಶ್ವತ್ಥನಾರಾಯಣ ಅವರೇನೋ ಹೇಳಿದ್ದಾರೆ. ಬಿಎಂಎಸ್ ಟ್ರಸ್ಟ್ ನಲ್ಲಿ ನಾನೇನೂ ತಿಂದಿಲ್ಲ ಎಂದು ಕಲಾಪದಲ್ಲಿ ಸುಳ್ಳು ಹೇಳಿದ್ದಾರೆ. ಆದರೆ, ಟ್ರಸ್ಟ್ ಲಪಟಾಯಿಸಲು ಹೊರಟಿರುವ ವ್ಯಕ್ತಿಯ ಜತೆ ಅವರು ಹೊಂದಿರುವ ಸಂಬಂಧ ಎಂತಹದು ಎನ್ನುವುದಕ್ಕೆ ನಾನು ಬಿಡುಗಡೆ ಮಾಡಿರುವ ಫೋಟೋ ಪ್ರಮುಖ ದಾಖಲೆ ಎಂದು ಹೆಚ್​ ಡಿಕೆ ತಿಳಿಸಿದರು.

ಸರ್ಕಾರ ಬರಲಿ ಅಂತ ಕಾಯ್ತಾ ಇದ್ದೀನಿ: ವಿಧಾನ ಮಂಡಲ ಅಧಿವೇಶನದಲ್ಲಿ ನಾನು ಈ ಟ್ರಸ್ಟಿನ ದಾಖಲೆಗಳನ್ನು ಇಟ್ಟರೆ ಒಬ್ಬರೂ ಮಾತನಾಡಲಿಲ್ಲ. ಇದನ್ನು ನಾನು ಇಲ್ಲಿಗೆ ಬಿಡೋದಿಲ್ಲ. ಸರ್ಕಾರ ಬರಲಿ ಅಂತ ಕಾಯ್ತಾ ಇದ್ದೀನಿ. ಇಂದು ನಮ್ಮ ಕುಟುಂಬದ ಬಗ್ಗೆ ಮಾತಾಡೋದಲ್ಲ. ಯಾವನಿಗೆ ಲೂಟಿ ಹೊಡೆಯಲು ಈ ಸಂಸ್ಥೆ ಕೊಟ್ಟಿದ್ದಾರೆ ಅವರು. ನಾಚಿಕೆ ಆಗಬೇಕು ಅವರಿಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಹೆಚ್.ಎಂ. ರಮೇಶ್ ಗೌಡ ಹಾಜರಿದ್ದರು.

ಇದನ್ನೂ ಓದಿ:'ನಿಷ್ಠೆಯಿಂದಿರುವ ನಾಯಕನಿಗೆ ರಾಜ್ಯದ ಪಟ್ಟ': ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ನುಡಿ

Last Updated : Feb 8, 2023, 6:37 AM IST

ABOUT THE AUTHOR

...view details